ಗಾಲೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವು ಅತ್ಯಂತ ಭಾವನಾತ್ಮಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಅಂಪೈರ್ ನೀಡಿದ ಎಲ್‌ಬಿಡಬ್ಲ್ಯೂ ತೀರ್ಪಿನಿಂದ ನಿರಾಶರಾಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ಅವರನ್ನು ತಡೆದು, ಸರಿಯಾದ ಸಮಯಕ್ಕೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ ಯುವ ಆಟಗಾರ ದೇವದತ್ ಪಡಿಕ್ಕಲ್ ಅವರ ಸಮಯಪ್ರಜ್ಞೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ರಿವ್ಯೂ ಯಶಸ್ವಿಯಾಗಿ ನಾಟೌಟ್ ತೀರ್ಪು ಬಂದ ನಂತರ, ರಾಹುಲ್ ಅವರು ಪಡಿಕ್ಕಲ್ ಅವರನ್ನು ಮೈದಾನದಲ್ಲೇ ಗಟ್ಟಿಯಾಗಿ ತಬ್ಬಿಕೊಂಡು ಧನ್ಯವಾದ ಅರ್ಪಿಸಿದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮೈದಾನದಲ್ಲಿ ನಡೆದಿದ್ದೇನು?
ಭಾರತ ತಂಡದ ಎರಡನೇ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಶ್ರೀಲಂಕಾದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಎಸೆದ ಅದ್ಭುತ ಆರ್ಮ್ ಬಾಲ್ ರಾಹುಲ್ ಅವರ ರಕ್ಷಣಾತ್ಮಕ ಬ್ಯಾಟಿಂಗ್ ಅನ್ನು ಮೀರಿ ಪ್ಯಾಡ್‌ಗೆ ಬಡಿಯಿತು. ಶ್ರೀಲಂಕಾ ಆಟಗಾರರ ಬಲವಾದ ಅಪೀಲ್‌ಗೆ ಸ್ಪಂದಿಸಿದ ಆನ್-ಫೀಲ್ಡ್ ಅಂಪೈರ್ ತಕ್ಷಣವೇ ಔಟ್ ಎಂದು ತೀರ್ಪು ನೀಡಿದರು. ಡಗೌಟ್‌ನಲ್ಲಿ ಕುಳಿತಿದ್ದ ನಾಯಕ ಶುಭಮನ್ ಗಿಲ್ ಕೂಡ ಇದನ್ನು ಔಟ್ ಎಂದೇ ಭಾವಿಸಿ ಪ್ಯಾಡ್ ಧರಿಸಲು ಮುಂದಾಗಿದ್ದರು. ಸ್ವತಃ ರಾಹುಲ್ ಅವರು ತಾವು ಔಟ್ ಆಗಿರುವುದಾಗಿ ಖಚಿತಪಡಿಸಿಕೊಂಡು ನಿರಾಶೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಲು ತೊಡಗಿದ್ದರು.
ನಿರ್ಧಾರ ಬದಲಿಸಿದ ಪಡಿಕ್ಕಲ್:
ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಕರ್ನಾಟಕದ ಸಹ-ಆಟಗಾರ ದೇವದತ್ ಪಡಿಕ್ಕಲ್ ತಕ್ಷಣವೇ ರಾಹುಲ್ ಅವರನ್ನು ತಡೆದರು. ಚೆಂಡು ಎತ್ತರದಲ್ಲಿ ಹೋಗುತ್ತಿರುವುದನ್ನು ಗಮನಿಸಿದ್ದ ಪಡಿಕ್ಕಲ್, ರಾಹುಲ್ಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಬಲವಂತ ಮಾಡಿದರು. ಪಡಿಕ್ಕಲ್ ಅವರ ಮಾತಿನ ಮೇಲೆ ನಂಬಿಕೆಯಿಟ್ಟು ರಾಹುಲ್ ಕೊನೆ ಕ್ಷಣದಲ್ಲಿ ರಿವ್ಯೂ ಕೋರಿದರು.
ಕೆಎಲ್ ರಾಹುಲ್ ನಿಟ್ಟುಸಿರು:
ದೊಡ್ಡ ಪರದೆಯ ಮೇಲೆ ಚೆಂಡಿನ ಚಲನೆಯನ್ನು ಪರಿಶೀಲಿಸಿದಾಗ, ಚೆಂಡು ಸ್ಟಂಪ್ಸ್‌ಗೆ ತಗುಲದೆ ಅದರ ಮೇಲಿಂದ ಹಾದು ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ತೃತೀಯ ಅಂಪೈರ್ ತಕ್ಷಣವೇ ಆನ್-ಫೀಲ್ಡ್ ಅಂಪೈರ್ ತೀರ್ಪನ್ನು ಬದಲಿಸಿ ರಾಹುಲ್ ಅವರನ್ನು ನಾಟೌಟ್ ಎಂದು ಪ್ರಕಟಿಸಿದರು. ಶ್ರೀಲಂಕಾ ಆಟಗಾರರು ಈ ತೀರ್ಪಿನಿಂದ ಅಚ್ಚರಿಗೊಂಡರೆ, ಜಯಸೂರ್ಯ ತಲೆ ಮೇಲೆ ಕೈ ಹೊತ್ತು ಪರದೆಯನ್ನೇ ನೋಡುತ್ತಾ ನಿಂತರು.
ಇದನ್ನೂ ಓದಿ: ಲೈವ್ನಲ್ಲೇ ಸಂಜಯ್ ಮಂಜ್ರೇಕರ್ – ಮುರಳಿ ಕಾರ್ತಿಕ್ ನಡುವೆ ‘ಅಸಹ್ಯ’ ವಾಗ್ವಾದ!
ಮೈದಾನದಲ್ಲೇ ಪ್ರೀತಿಯ ಅಪ್ಪುಗೆ:
ತಮ್ಮ ವಿಕೆಟ್ ಉಳಿದಿದ್ದರಿಂದ ನಿರಾಳರಾದ ಕೆ.ಎಲ್. ರಾಹುಲ್, ತಕ್ಷಣವೇ ಪಡಿಕ್ಕಲ್ ಅವರ ಬಳಿ ಓಡಿಹೋಗಿ ಗಟ್ಟಿಯಾಗಿ ತಬ್ಬಿಕೊಂಡರು. ಅಷ್ಟೇ ಅಲ್ಲದೆ ತಮಗೆ ಜೀವದಾನ ಕೊಡಿಸಿದ ಕೃತಜ್ಞತೆಗಾಗಿ ಪಡಿಕ್ಕಲ್ ಅವರ ಹೆಲ್ಮೆಟ್‌ಗೆ ಪ್ರೀತಿಯ ಮುತ್ತೊಂದನ್ನು ನೀಡಿದರು. ಕರ್ನಾಟಕದ ಇಬ್ಬರು ಆಟಗಾರರ ನಡುವಿನ ಈ ಅದ್ಭುತ ಒಡನಾಟ ಹಾಗೂ ಬಾಂಧವ್ಯದ ಕ್ಷಣವನ್ನು ಅಭಿಮಾನಿಗಳು “ದಿನದ ಅತ್ಯುತ್ತಮ ಕ್ಷಣ” ಎಂದು ಬಣ್ಣಿಸುತ್ತಿದ್ದಾರೆ.
— Pat (@starlord_208) August 18, 2026
ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ದ್ವಿತೀಯ ಇನಿಂಗ್ಸ್‌ನಲ್ಲಿ 44 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದೆಡೆ ಕೆಎಲ್ ರಾಹುಲ್ 35 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಶುಭ್ಮನ್ ಗಿಲ್ (9) ಕೂಡ ಔಟಾಗಿದ್ದು, 29 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 116 ರನ್ ಕಲೆಹಾಕಿದೆ.
