ಚಾಮರಾಜನಗರ, ಫೆಬ್ರವರಿ 25: ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಮಾರಾಮಾರಿ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸರಗೂರು ಬಳಿ ನಡೆದಿದೆ. ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ನಲ್ಲಿ ಪ್ರಯಾಣಿಕರು ಕಡಲೆಕಾಯಿ ಸಿಪ್ಪೆಯನ್ನು ಬಿಸಾಡಿದ್ದಾರೆ. ಇದನ್ನ ನಿರ್ವಾಹಕ ಪ್ರಶ್ನಿಸಿದ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ, ಸರಗೂರು ಬೈಪಾಸ್ ಬಳಿ ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಬಡಿದಾಟವೇ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದ ಪರಿಣಾಮ ಚಾಮರಾಜನಗರದ ಪ್ರಯಾಣಿಕರಾದ ಫಯಾಜ್ ಅಹ್ಮದ್ ಮತ್ತು ಶಾರಾನ್, ನಿರ್ವಾಹಕ ಕನಕಪುರದ ಮುನಿಮಾದಯ್ಯಗೆ ಥಳಿಸಿದ್ದಾರೆ. ಘಟನೆಯಲ್ಲಿ ಮೂವರೂ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆ ನಡೆದ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: KSRTC ಬಸ್ ಸೀಜ್; ಪ್ರಯಾಣಿಕರ ಸಮೇತ ಠಾಣೆಗೆ ತಂದ ಟ್ರಾಫಿಕ್ ಪೊಲೀಸ್
ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್
ರಸ್ತೆ ಮಧ್ಯೆಯೇ KSRTC ಬಸ್ ಕೆಟ್ಟುನಿಂತ ಪರಿಣಾಮ, ವಾಹನ ತಳ್ಳಿ ತಳ್ಳಿ ಪ್ರಯಾಣಿಕರು ಹಾಗೂ ನಿರ್ವಾಹಕ ಹೈರಾಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಬೋಳ ರಾಮೇಶ್ವರ ದೇವಾಲಯ ಬಳಿ ನಡೆದಿದೆ. ಮೂಡಿಗೆರೆಯಿಂದ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್ ಅರ್ಧ ದಾರಿಯಲ್ಲೇ ಕೈಕೊಟ್ಟ ಪರಿಣಾಮ, ಇತರ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಟ್ರಾಫಿಕ್ ಜಾಮ್ ಉಂಟಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪ್ರಯಾಣಿಕರ ಬಾಯಾರಿಕೆ ನೀಗಿಸುತ್ತಿರುವ ಬಸ್ ಸಿಬ್ಬಂದಿ
ಬಿಸಿಲ ಝಳಕ್ಕೆ ತತ್ತರಿಸಿದ ಪ್ರಯಾಣಿಕರಿಗೆ KSRTC ಚಾಲಕ ಮತ್ತು ನಿರ್ವಾಹಕರು ಆಸರೆಯಾಗಿದ್ದು, ಬಸ್ನಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಟಿ.ನರಸೀಪುರ , ಬನ್ನೂರು ಮತ್ತು ಮಂಡ್ಯ ಮಾರ್ಗದ ಬಸ್ಗಳಲ್ಲಿ ಪ್ರಯಾಣಿಕರ ದಾಹ ನೀಗಿಸಲು ಸಾರಿಗೆ ಸಿಬ್ಬಂದಿ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ. ಶುದ್ಧ ನೀರಿನ ಘಟಕಗಳಿಂದ ಪ್ರತಿದಿನ 2-3 ಕ್ಯಾನ್ ನೀರು ತರುವ ಸಿಬ್ಬಂದಿ, ಜನರ ಮುಖದಲ್ಲಿನ ತೃಪ್ತಿಯೇ ನಮಗೆ ಸಿಗುವ ದೊಡ್ಡ ಗೌರವ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
