ದೋಹಾ, ಜೂನ್ 22: ಗಲ್ಫ್ ರಾಷ್ಟ್ರವಾದ ಕತಾರ್‌ನ ಪ್ರಮುಖ ಗ್ಯಾಸ್ ಪ್ಲಾಂಟ್ (ಅನಿಲ ಕಾರ್ಖಾನೆ) ಒಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ, 66ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಭಾರತೀಯ ಮೂಲದ ಕಾರ್ಮಿಕರೂ ಸೇರಿದ್ದಾರೆ ಎಂದು ಕತಾರ್ (Qatar) ಇಂಧನ ಸಚಿವ ಸಾದ್ ಶೆರಿದಾ ಅಲ್-ಕಾಬಿ ದೋಹಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.
ಕತಾರ್‌ನ ಕೈಗಾರಿಕಾ ವಲಯದಲ್ಲಿರುವ ಪ್ರಮುಖ ಗ್ಯಾಸ್ ಸಂಸ್ಕರಣಾ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಅನಿಲ ಸೋರಿಕೆಯಿಂದಾಗಿ ಈ ಭೀಕರ ಸ್ಫೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಇಡೀ ಆವರಣಕ್ಕೆ ಬೆಂಕಿ ವ್ಯಾಪಿಸಿದೆ. ಸ್ಫೋಟದ ತೀವ್ರತೆಯಿಂದಾಗಿ ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ.
ಗಾಯಗೊಂಡ 66 ಜನರನ್ನು ದೋಹಾದ ಹಮದ್ ಜನರಲ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ.
ಇದನ್ನೂ ಓದಿ: ಕತಾರ್ ಅನಿಲ ಘಟಕದ ಮೇಲಿನ ಇರಾನ್ ಘಾತಕ ದಾಳಿಯಿಂದ ಭಾರತಕ್ಕೆ ಇನ್ನೆಷ್ಟು ವರ್ಷ ಕಾಡಲಿದೆ ಅನಿಲ ಸಮಸ್ಯೆ
ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೃತಪಟ್ಟವರಲ್ಲಿ ಮತ್ತು ಗಾಯಗೊಂಡವರಲ್ಲಿ ಭಾರತೀಯರ ಗುರುತು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ತೊಂದರೆಗೆ ಸಿಲುಕಿದ ಕಾರ್ಮಿಕರ ಕುಟುಂಬದವರಿಗೆ ನೆರವಾಗಲು ರಾಯಭಾರ ಕಚೇರಿಯು ವಿಶೇಷ ಸಹಾಯವಾಣಿಯನ್ನು ತೆರೆದಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಭಾರತೀಯ ರಾಯಭಾರ ಕಚೇರಿಯನ್ನು +974-55647502, +974-55384683 ಸಂಖ್ಯೆಗಳ ಮೂಲಕ ಅಥವಾ cons.doha@mea.gov.in ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.
Breaking:
“I find myself having to do something I always hoped would never happen. And that is to announce the tragic loss of 15 lives of our people who were of Indian and Pakistani nationalities,” says Qatar’s energy minister after massive explosion at LNG plant pic.twitter.com/nJLgDdCnv3
— Shashank Mattoo (@MattooShashank) June 22, 2026
ಈ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಕತಾರ್‌ನ ಆಂತರಿಕ ಸಚಿವಾಲಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಾರ್ಖಾನೆಯಲ್ಲಿ ಸುರಕ್ಷತಾ ನಿಯಮಗಳ ಲೋಪವಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಕತಾರ್ ಸರ್ಕಾರ ಆದೇಶಿಸಿದೆ. ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಇಂತಹ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ, ಈ ಘಟನೆಯು ಅನಿವಾಸಿ ಭಾರತೀಯರ ವಲಯದಲ್ಲಿ ಭಾರಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್‌ನ ಅತಿದೊಡ್ಡ ಎಲ್ಎನ್ಜಿ ಸ್ಥಾವರ
ಸ್ಫೋಟಗೊಂಡಿರುವ ಬರ್ಜಾನ್ ಸ್ಥಾವರವು ಪ್ರತಿದಿನ ಸುಮಾರು 1.4 ಬಿಲಿಯನ್ ಪ್ರಮಾಣಿತ ಘನ ಅಡಿ ಗ್ಯಾಸ್ ಅನ್ನು ಸಂಸ್ಕರಿಸುತ್ತಿತ್ತು, ಇದು ಕತಾರ್‌ನ ಒಳಗಿನ ವಿದ್ಯುತ್ ಉತ್ಪಾದನೆ ಮತ್ತು ನೀರು ಉಪ್ಪುನೀಕರಣ ಪ್ರಕ್ರಿಯೆಗಳಿಗೆ ಇಂಧನ ಪೂರೈಸುತ್ತಿತ್ತು. ಕತಾರ್ ವಿಶ್ವದ ಅತಿ ದೊಡ್ಡ ನೈಸರ್ಗಿಕ ಅನಿಲ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. ಇದು ಪರ್ಷಿಯನ್ ಕೊಲ್ಲಿಯಲ್ಲಿರುವ ತನ್ನ ಕಡಲಾಚೆಯ ಅನಿಲ ವಲಯವನ್ನು ಇರಾನ್‌ನೊಂದಿಗೆ ಹಂಚಿಕೊಂಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
