
ಬೆಳಗಾವಿ, ಮಾರ್ಚ್ 09: ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ವಾಹನ ಕಳವು ಮಾಡುತ್ತಿದ್ದ ಖತರ್ನಾಕ್ ಅಂತಾರಾಜ್ಯ ಕಳ್ಳರ ಗ್ಯಾಂಗ್ನ ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ಸು ಕಂಡಿದ್ದಾರೆ. ವಾಹನವೊಂದರ ಕಳ್ಳತನ ಪ್ರಕರಣದ ಬೆನ್ನು ಬಿದ್ದ ಖಾಕಿ ಬರೋಬ್ಬರಿ 1 ಕೋಟಿ ಮೌಲ್ಯದ 21 ವಾಹನಗಳನ್ನ ಜಪ್ತಿ ಮಾಡಿದೆ. ಒಟ್ಟು 8 ಜನ ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಉಳಿದ ಮೂವರು ಆರೋಪಿಗಳಿಗಾಗಿಯೂ ಬಲೆ ಬೀಸಿದೆ.
ಯುಸೂಫ್ ಖಾನ್, ಜಾಕೀರ್ ಹುಸೇನ್, ಶಫೀಕ್ ಅಹಮ್ಮದ್, ಆಜಾದ್ ಹಾಗೂ ಬಶೀರ್ ಅಹಮ್ಮದ್ ಬಂಧಿತ ಆರೋಪಿಗಳು. ಇವರು ಕರ್ನಾಟಕ ಮತ್ತು ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೂಲದವರು ಎಂಬುದು ಗೊತ್ತಾಗಿದೆ. ಆರೋಪಿಗಳಿಂದ 8 ಮಿನಿ ಗೂಡ್ಸ್ ವಾಹನ, ರಾಯಲ್ ಎನ್ಫೀಲ್ಡ್ ಮತ್ತು ಹೋಂಡಾ ಸೇರಿ ಒಟ್ಟು 8 ಬೈಕ್ಗಳು, 5 ಸ್ಕೂಟರ್ಗಳನ್ನು ಜಪ್ತಿ ಮಾಡಲಾಗಿದೆ. ಒಂದು ವಾಹನ ಕಳ್ಳತನವಾಗಿದೆ ಅಂತಾ ಹುಡುಕಾಟ ಶುರು ಮಾಡಿದ್ದ ಪೊಲೀಸರ ಬಲೆಗೆ ದೊಡ್ಡ ತಿಮಿಂಗಲವೇ ಬಿದ್ದಿದೆ.
ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!
ಮೂರು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಒಂದು ಮಿನಿ ಗೂಡ್ಸ್ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಮಾರಿಹಾಳ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಬೈಕ್ ಮೇಲೆ ಬಂದಿದ್ದ ನಾಲ್ಕು ಜನ ಮಿನಿ ಗೂಡ್ಸ್ ವಾಹನ ಕದ್ದು ಪರಾರಿಯಾಗಿರೋದು ಗೊತ್ತಾಗಿತ್ತು. ಆರೋಪಿಗಳು ಬಂದಿದ್ದ ಬೈಕ್ ನಂಬರ್ನ ಮಾಹಿತಿಗಾಗಿ ಪೊಲೀಸರು ಬೆನ್ನುಬಿದ್ದಾಗ ಆ ಬೈಕ್ ಕೂಡ ಕಳ್ಳತನ ಆಗಿರೋದು ಎನ್ನುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆರೋಪಿಗಳು ಕದ್ದ ವಾಹನಗಳನ್ನೇ ಬಳಸಿಕೊಂಡು ಮತ್ತೊಂದು ವಾಹನ ಕಳ್ಳತನ ಮಾಡುತ್ತಿರುವ ವಿಚಾರ ತಿಳಿದ ಪೊಲೀಸರು, ಸಿಸಿಟಿವಿ ಹಾಗೂ ಟೆಕ್ನಿಕಲ್ ಎವಿಡನ್ಸ್ ಆಧಾರದ ಮೇಲೆ ಕೊನೆಗೂ ಐದು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾಗಿದ್ದ ತಮ್ಮ ವಾಹನಗಳು ಮರಳಿ ಸಿಕ್ಕ ಹಿನ್ನೆಲೆ ಅವುಗಳ ಮಾಲೀಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.