ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ತೆಲಂಗಾಣ ಯುವಕ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಾರೆ. ನಾಳೆ (ಫೆಬ್ರವರಿ 26) ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಲಿದ್ದು, ಇಂದು ಸಂಗೀತ್ ಕಾರ್ಯಕ್ರಮ ಆಯೋಜನೆಗೊಂಡಿದೆ. ಬಲು ಅದ್ಧೂರಿಯಾಗಿ ಮದುವೆ ನಡೆಯುತ್ತಿದ್ದು ವಧು-ವರರಿಗೆ ಆಪ್ತವಾಗಿರುವ ಕೆಲವು ಸಿನಿಮಾ ಸೆಲೆಬ್ರಿಟಿಗಳು ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಅವರು ಸಹ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಅವರ ಹೊರತಾಗಿ ಕನ್ನಡ ಚಿತ್ರರಂಗದ ಇನ್ಯಾರಿಗೂ ಆಹ್ವಾನ ಇಲ್ಲವೇ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ದೊರಕಿದೆ.
ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದ ಹಲವು ಪ್ರಮುಖ ನಟ, ನಟಿಯರು ಮತ್ತು ನಿರ್ದೇಶಕರುಗಳಿಗೆ ಆಹ್ವಾನ ನೀಡಿದ್ದಾರೆ ಆದರೆ ಮದುವೆಗಲ್ಲ ಬದಲಿಗೆ ರಿಸೆಪ್ಷನ್ಗೆ. ಮದುವೆಗೆ ಕುಟುಂಬ ಸದಸ್ಯರು ಮತ್ತು ಬಹಳ ಆಪ್ತವಾಗಿರುವ ಕೆಲವೇ ಸ್ನೇಹಿತರನ್ನು ಹೊರತುಪಡಿಸಿ ಇನ್ಯಾರಿಗೂ ಆಹ್ವಾನ ನೀಡಿಲ್ಲ. ಆದರೆ ಮಾರ್ಚ್ 4 ರಂದು ನಡೆಯಲಿರುವ ಅದ್ಧೂರಿ ರಿಸೆಪ್ಷನ್ಗೆ ತೆಲುಗು, ಬಾಲಿವುಡ್ ಮತ್ತು ಸ್ಯಾಂಡಲ್ವುಡ್ನ ಹಲವು ನಟ-ನಟಿಯರಿಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಆಹ್ವಾನ ನೀಡಿದ್ದಾರೆ.
ಕನ್ನಡ ಚಿತ್ರರಂಗದವರಾದರೂ ನಾನಾ ಕಾರಣಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿರುವ ರಶ್ಮಿಕಾ ತಮ್ಮ ಮದುವೆಗೂ ಸಹ ಕನ್ನಡ ಚಿತ್ರರಂಗದ ಯಾರನ್ನೂ ಆಹ್ವಾನಿಸಿಲ್ಲ ಎನ್ನಲಾಗಿತ್ತು, ಶೆಟ್ಟಿ ಗ್ಯಾಂಗಿನ ಪ್ರಮೋದ್ ಶೆಟ್ಟಿ ಅವರಂತೂ ರಶ್ಮಿಕಾ ನಮ್ಮನ್ನು ಕರೆಯುವುದಿಲ್ಲ ಎಂಬುದು ಗೊತ್ತಿರುವುದೇ ಎಂದು ವ್ಯಂಗ್ಯ ಮಾಡಿದ್ದರು. ಆದರೆ ರಶ್ಮಿಕಾ ಅವರು ಕನ್ನಡ ಚಿತ್ರರಂಗದ ಕೆಲವು ಪ್ರಮುಖ ನಟ-ನಟಿಯರಿಗೆ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ:ವಿಜಯ್ ಪಾಲಕರು ರಶ್ಮಿಕಾ ಮಂದಣ್ಣಗೆ ಹಾಕಿದ ಷರತ್ತು ಏನು?
ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಆಶಿಕಾ ರಂಗನಾಥ್, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್, ನಿರ್ದೇಶಕರಾದ ಎ ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಸೇರಿ ಒಟ್ಟು 11 ಜನರಿಗೆ ಆರತಕ್ಷತೆಯ ಆಮಂತ್ರಣ ಪತ್ರಿಕೆಯನ್ನು ರಶ್ಮಿಕಾ ಮಂದಣ್ಣ ತಲುಪಿಸಿದ್ದಾರೆ. ಇದರ ಜೊತೆಗೆ ಖುದ್ದು ಸಂದೇಶ ಕಳಿಸಿ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ರಶ್ಮಿಕಾರನ್ನು ಚಿತ್ರರಂಗಕ್ಕೆ ಲಾಂಚ್ ಮಾಡಿದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅಥವಾ ಒಟ್ಟಾರೆ ಶೆಟ್ಟಿ ಗ್ಯಾಂಗಿಗೆ ಆಹ್ವಾನವನ್ನು ರಶ್ಮಿಕಾ ನೀಡಿಲ್ಲ.
ಆಹ್ವಾನ ಸಿಕ್ಕಿರುವ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ನಟಿ ಆಶಿಕಾ ರಂಗನಾಥ್ ಈಗಾಗಲೇ ಮದುವೆಗೆ ತೆರಳಿದ್ದಾರೆ. ಆರತಕ್ಷತೆಗೆ ಯಾರ್ಯಾರು ಹೋಗಲಿದ್ದಾರೆ ಎಂಬುದು ಮಾರ್ಚ್ 04 ರಂದು ತಿಳಿಯಲಿದೆ. ಮಾರ್ಚ್ 04 ರಂದು ಹೈದರಾಬಾದ್ನ ತಾಜ್ ಕೃಷ್ಣ ಐಶಾರಾಮಿ ಹೋಟೆಲ್ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ತೆಲುಗು ಚಿತ್ರರಂಗದ ಹಲವಾರು ಮಂದಿ ಸೆಲೆಬ್ರಿಟಿಗಳು, ಬಾಲಿವುಡ್ನ ಸೆಲೆಬ್ರಿಟಿಗಳ ಜೊತೆಗೆ ಆಂಧ್ರ ಮತ್ತು ತೆಲಂಗಾಣದ ರಾಜಕಾರಣಿಗಳು ಸಹ ಆರತಕ್ಷತೆಯಲ್ಲಿ ಭಾಗಿ ಆಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
