ಮೈಸೂರು, ಆಗಸ್ಟ್ 3: ಮೈಸೂರು ಜಿಲ್ಲೆಯ ಎಚ್ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯ ಕಬಿನಿ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮವಾಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ, ಕಬಿನಿ ಜಲಾಶಯದಿಂದ ಹೊರಹರಿವನ್ನು ಹೆಚ್ಚಿಸಲಾಗಿದ್ದು, ಇದರ ನೇರ ಪರಿಣಾಮವಾಗಿ ಜಲಾಶಯದ ಸಮೀಪವಿರುವ ಸರ್ಗೂರು ತಾಲೂಕಿನ ಬಿದರಹಳ್ಳಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಈ ಸೇತುವೆ ಬಿದರಹಳ್ಳಿ ಗ್ರಾಮ ಮತ್ತು ಎಚ್.ಡಿ. ಕೋಟೆ ನಡುವೆ ಪ್ರಮುಖ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಸೇತುವೆ ಮುಳುಗಡೆಯಾಗುವುದರಿಂದ, ಗ್ರಾಮಸ್ಥರು ಸುಮಾರು 15 ಕಿಲೋಮೀಟರ್ ಹೆಚ್ಚುವರಿ ದೂರವನ್ನು ಸುತ್ತಿ ಬರಬೇಕಾಗಿದೆ. ಇದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ತೆರಳುವ ರೋಗಿಗಳಿಗೆ ತೀವ್ರ ತೊಂದರೆಯನ್ನುಂಟುಮಾಡಿದೆ. ಈ ಸಮಸ್ಯೆ ಪ್ರತಿ ಮಳೆಗಾಲದಲ್ಲೂ ಎದುರಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರವಾಗಿ ಅತ್ಯಾಧುನಿಕ ಹೊಸ ಸೇತುವೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮುಂದಿನ ಮಳೆಗಾಲದ ವೇಳೆಗೆ ಈ ಸೇತುವೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ