ಮೈಸೂರು, (ಆಗಸ್ಟ್ 07): ಮತ್ತೆ ಕಬಿನಿ ಡ್ಯಾಂಗೆ ಒಳಹರಿವು ಹೆಚ್ಚಳವಾಗಿದ್ದು, ನೀರು ಬಿಡುಗಡೆ ಬಗ್ಗೆ ನದಿ ಪಾತ್ರದವರಿಗೆ ಅಲರ್ಟ್ ನೀಡಲಾಗಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಡ್ಯಾಂನಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ. ಆರಂಭದಲ್ಲಿ 7,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ 10,000-15,000 ಕ್ಯೂಸೆಕ್‌ವರೆಗೆ ನೀರು ಹೆಚ್ಚಳ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಿಗೆ ತೆರಳದಂತೆ, ಜಾನುವಾರುಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮೈಸೂರು, ನಂಜನಗೂಡು, ಟಿ.ನರಸೀಪುರ ಸೇರಿದಂತೆ ನದಿ ತೀರದ ಜನರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮದಿಂದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
