
ಕಮಲ್ ಹಾಸನ್ (Kamal Haasan) ಭಾರತದ ಸ್ಟಾರ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಆಗಿರುವ ಜೊತೆಗೆ ರಾಜಕಾರಣಿಯೂ ಹೌದು. ಇತ್ತೀಚೆಗಷ್ಟೆ ಅವರು ರಾಜ್ಯಸಭೆಗೆ ಸಹ ಆಯ್ಕೆ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ಕಮಲ್ ಹಾಸನ್ ಅವರು ‘ಮಕ್ಕಳ್ ನಿಧಿ ಮಯಂ’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಬಲಗೊಳಿಸುವ ಪ್ರಯತ್ನ ಮಾಡಿದ್ದರು. ತಮಿಳುನಾಡಿನ ಬಲಿಷ್ಟ ಪಕ್ಷವಾದ ಡಿಎಂಕೆಗೆ ಸವಾಲೊಡ್ಡುವ ಪಕ್ಷ ಎಂದೇ ಆರಂಭದಲ್ಲಿ ಬಿಂಬಿತವಾಗಿತ್ತು. ಆದರೆ ಈ ಬಾರಿ ಕಮಲ್ ಹಾಸನ್ ಅವರ ಪಕ್ಷ ಚುನಾವಣೆ ಸ್ಪರ್ಧಿಸುತ್ತಲೇ ಇಲ್ಲ.
ಡಿಎಂಕೆ ಎದುರಾಳಿ ಎಂದೇ ಗುರುತಿಸಿಕೊಂಡಿದ್ದ ಕಮಲ್ ಹಾಸನ್ ಅವರು ಸ್ವತಃ ಡಿಎಂಕೆಯಿಂದ ಸೀಟು ಪಡೆದು ರಾಜ್ಯಸಭೆ ಪ್ರವೇಶಿಸಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇದು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ವಪಕ್ಷೀಯರಿಂದಲೇ ಕಮಲ್ ಹಾಸನ್ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಂದ ತಲಾ 50,000 ರೂಪಾಯಿ ಅರ್ಜಿ ಶುಲ್ಕವನ್ನ ‘ಮಕ್ಕಳ್ ನೀಧಿ ಮೈಯಂ’ ಪಕ್ಷ ಸಂಗ್ರಹಿಸಿತ್ತು, ಆದರೆ ಈಗ ಸ್ವತಃ ಕಮಲ್ ಹಾಸನ್ ಅವರೇ ಚುನಾವಣೆಗೆ ಹೋಗದಿರುವ ನಿರ್ಧಾರ ಮಾಡಿದ ಬಳಿಕ, ಆಕಾಂಕ್ಷಿ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿರುವುದು ಮಾತ್ರವೇ ಅಲ್ಲದೆ, ತಮ್ಮ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಫ್ಲಾಪ್ ಚಿತ್ರಕ್ಕೆ ಸೀಕ್ವೆಲ್ ಮಾಡಲು ಕಮಲ್ ಹಾಸನ್ ಉತ್ಸಾಹ; ಹಿಂದೆ ಸರಿದ ನಿರ್ಮಾಣ ಸಂಸ್ಥೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ತಲಾ 50,000 ರೂ.ಗಳನ್ನು ಪಕ್ಷಕ್ಕೆ ಪಾವತಿಸಿದ್ದರು. ಆದರೆ ಈಗ ಕಮಲ್ ಹಾಸನ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿರುವುದರಿಂದ, ಆಕಾಂಕ್ಷಿಗಳು ತಮ್ಮ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಅಭ್ಯರ್ಥಿಗಳ ಈ ಬೇಡಿಕೆಗೆ ಪ್ರತಿಕ್ರಿಯಿಸಿರುವ ಪಕ್ಷದ ಪದಾಧಿಕಾರಿಗಳು, ಪಾವತಿಸಿದ ಮೊತ್ತವನ್ನು ‘ಪಕ್ಷಕ್ಕೆ ನೀಡಿದ ದೇಣಿಗೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಅದನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಎಂಎನ್ಎಂ, ತನಗೆ ನೀಡಲಾದ ಸೀಟುಗಳ ಸಂಖ್ಯೆ ಕಡಿಮೆ ಇರುವುದು ಮತ್ತು ಡಿಎಂಕೆಯ ಚಿಹ್ನೆಯಡಿ ಸ್ಪರ್ಧಿಸುವಂತೆ ಬಂದ ಸಲಹೆಯನ್ನು ಒಪ್ಪದ ಕಾರಣ ಏಪ್ರಿಲ್ 23ರ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿತ್ತು. ಕಮಲ್ ಹಾಸನ್ ಅವರು ತಮ್ಮ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಚುನಾವಣೆ ಕಣಕ್ಕಿಳಿಯಲು ಉತ್ಸುಕರಾಗಿದ್ದ ಅಭ್ಯರ್ಥಿಗಳಿಗೆ ಇದು ತೀವ್ರ ಅಸಮಾಧಾನ ಮೂಡಿಸಿದೆ. ಇದೀಗ ಸ್ವಪಾರ್ಟಿಯಲ್ಲೇ ಕಮಲ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ