Headlines

‘ಕರಾವಳಿ’ ಟ್ರೇಲರ್ ಲಾಂಚ್​​ಗೆ ನಟ ಪ್ರಜ್ವಲ್​​​ಗೇ ಇಲ್ಲ ಆಹ್ವಾನ; ಸಿಡಿದೆದ್ದ ಫ್ಯಾನ್ಸ್ – Kannada News | Karavali Movie Trailer Launch Controversy: Prajwal Devaraj Fans Uproar after his Absent

ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾ ಈಗ ವಿವಾದದ ಮೂಲಕ ಸುದ್ದಿ ಆಗಿದೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ರಾಜ್ ಬಿ. ಶೆಟ್ಟಿ ಹಾಗೂ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್ ಲಾಂಚ್​​ನಲ್ಲಿ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ಗಾಂಧಿನಗರದ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ನಿರೂಪಕಿ ಅನುಶ್ರೀ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಆದರೆ, ಕಾರ್ಯಕ್ರಮದ ಮಧ್ಯದಲ್ಲೇ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಭಾರೀ ಹಂಗಾಮಾ ಸೃಷ್ಟಿಸಿದ್ದಾರೆ.

ಗದ್ದಲಕ್ಕೆ ಮುಖ್ಯ ಕಾರಣಗಳೇನು?

ಪ್ರಜ್ವಲ್ ದೇವರಾಜ್‌ಗೆ ಆಹ್ವಾನವಿಲ್ಲ: ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೂ, ಸ್ವತಃ ನಟ ಪ್ರಜ್ವಲ್ ದೇವರಾಜ್ ಅವರನ್ನೇ ಈ ಮುಖ್ಯ ಕಾರ್ಯಕ್ರಮಕ್ಕೆ ಚಿತ್ರತಂಡ ಆಹ್ವಾನಿಸಿಲ್ಲ ಎಂದು ಅಭಿಮಾನಿಗಳು ತೀವ್ರ ಬೇಸರ ಹೊರಹಾಕಿದ್ದಾರೆ. ‘ಕರಾವಳಿ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರು ಡಬ್ ಮಾಡಿಲ್ಲ ಎನ್ನುವ ಸುದ್ದಿ ಅಭಿಮಾನಿಗಳ ಆಕ್ರೋಶವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಕರವೇ ಪ್ರವೀಣ್ ಶೆಟ್ಟಿ ಮತ್ತು ಅಭಿಮಾನಿಗಳ ನಡುವೆ ಜಟಾಪಟಿ

ಅನುಶ್ರೀ ನಿರೂಪಣೆ ಮಾಡುತ್ತಿದ್ದ ವೇಳೆ ವೇದಿಕೆ ಬಳಿ ನುಗ್ಗಿದ ಅಭಿಮಾನಿಗಳು ಕಾರ್ಯಕ್ರಮಕ್ಕೆ ತಡೆಯೊಡ್ಡಿದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಹಾಗೂ ಚಿತ್ರತಂಡದ ಸದಸ್ಯರ ನಡುವೆ ಮತ್ತು ಪ್ರಜ್ವಲ್ ಅಭಿಮಾನಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಚಿತ್ರದಲ್ಲಿ ಸ್ಟಾರ್ ನಟನಿದ್ದರೂ ಅವರಿಗೆ ಸೂಕ್ತ ಗೌರವ ನೀಡಿಲ್ಲ ಮತ್ತು ಚಿತ್ರತಂಡದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಅಭಿಮಾನಿಗಳು ನೇರವಾಗಿ ಕಿಡಿಕಾರಿದ್ದಾರೆ.

ಪೇಮೆಂಟ್ ಆಗಿದೆ:

ಕಾರ್ಯಕ್ರಮಕ್ಕೆ ಪ್ರಜ್ವಲ್ ಅವರನ್ನು ಆಹ್ವಾನಿಸಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಗುರುದುತ್ ಗಾಣಿಗ, ‘ರಾತ್ರಿವರೆಗೂ ಪ್ರಜ್ವಲ್ ಅವರು ಬರುತ್ತೇನೆ ಎಂದಿದ್ದರು ಮತ್ತು ಅವರ ಅಭಿಮಾನಿಗಳಿಗೂ ಪಾಸ್ ವ್ಯವಸ್ಥೆ ಮಾಡಲಾಗಿತ್ತು . ಪ್ರಜ್ವಲ್ ಅವರ ಧ್ವನಿ ಈ ಪಾತ್ರಕ್ಕೆ ಸೂಟ್ ಆಗುತ್ತದೋ ಇಲ್ಲವೋ ಎಂಬ ಅನುಮಾನವಿತ್ತು. ಆದರೂ ಅವರಿಗಾಗಿ ಡಬ್ಬಿಂಗ್ ಸ್ಟುಡಿಯೋ ಬ್ಲಾಕ್ ಮಾಡಲಾಗಿದ್ದು, ಟ್ರೈಲರ್ ಮುಗಿದ ನಂತರ ಡಬ್ ಮಾಡಿ ಎಂದು ಹೇಳಿದ್ದೆವು. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದಿದ್ದಾರೆ.

‘ಇದೇ ವೇಳೆ ಸಂಭಾವನೆ ವಿಚಾರವನ್ನು ಬಹಿರಂಗಪಡಿಸಿರುವ ತಂಡ, ಪ್ರಜ್ವಲ್ ಅವರಿಗೆ 1 ಕೋಟಿ 25 ಲಕ್ಷ ರೂಪಾಯಿ ಪೇಮೆಂಟ್ ನಿಗದಿಯಾಗಿದ್ದು, ಈಗಾಗಲೇ 1 ಕೋಟಿ ರೂಪಾಯಿ ನೀಡಲಾಗಿದೆ ಹಾಗೂ ಇನ್ನು 25 ಲಕ್ಷ ರೂಪಾಯಿ ಕೊಡುವುದು ಬಾಕಿ ಇದೆ. ಪೋಸ್ಟರ್‌ಗಳಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೆಸರೇ ಪ್ರಮುಖವಾಗಿದೆ, ರಾಜ್ ಬಿ. ಶೆಟ್ಟಿ ಹಾಗೂ ಮಿತ್ರ ಅವರ ಹೆಸರುಗಳೇ ಇಲ್ಲ’ ಎಂದಿದ್ದಾರೆ ಗುರುದುತ್ ಗಾಣಿಗ.

ರಾಜ್ ಬಿ ಶೆಟ್ಟಿ ಬೇಸರ

ಮತ್ತೊಂದೆಡೆ ಪ್ರಜ್ವಲ್ ಅಭಿಮಾನಿಗಳ ಆಕ್ರೋಶಕ್ಕೆ ನಟ ರಾಜ್ ಬಿ. ಶೆಟ್ಟಿ ತೀಕ್ಷ್ಣವಾಗಿ ರಿಯಾಕ್ಷನ್ ನೀಡಿದ್ದಾರೆ. ‘ನಾನು ಈ ಸಿನಿಮಾದಲ್ಲಿ ಕೇವಲ ಅತಿಥಿ ಪಾತ್ರ ಮಾಡಿದ್ದೇನೆಯೇ ಹೊರತು, ನಾನಿಲ್ಲಿ ಯಾರಿಗೂ ಕಾಂಪಿಟಿಷನ್ ಮಾಡಲು ಬಂದಿಲ್ಲ. ಚಿತ್ರತಂಡದ ಮೊದಲ ಆಯ್ಕೆ ಕೂಡ ನಾನಾಗಿರಲಿಲ್ಲ. ಸಿನಿಮಾದಲ್ಲಿ ನನ್ನ ಹೆಸರು ಹಾಕದಿದ್ದರೂ ನನಗೆ ಬೇಸರವಿಲ್ಲ, ಏಕೆಂದರೆ ನನಗಿಂತ ಸಿನಿಮಾ ದೊಡ್ಡದು. ಇದು ಇಡೀ ದೇಶವೇ ನೋಡುವಂತಹ ಕಥೆಯಾಗಿದೆ. ನನಗೆ ಕಟೌಟ್ ಹಾಕಿ ಎಂದು ನಾನು ಎಂದೂ ಕೇಳಿಲ್ಲ’ ಎಂದಿದ್ದಾರೆ ರಾಜ್.

ಇದನ್ನೂ ಓದಿ: ‘ಕರಾವಳಿ’ ಸಿನಿಮಾ ಸೆಟ್​​ನಲ್ಲಿ ಪ್ರಜ್ವಲ್ ದೇವರಾಜ್ ಕ್ರಿಕೆಟ್ ಆಟ: ವಿಡಿಯೋ

ಇದೇ ವೇಳೆ ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಬೇಸರ ಹೊರಹಾಕಿದ ರಾಜ್, ‘ನಮ್ಮ ಇಂಡಸ್ಟ್ರಿ ಯಾಕೆ ಉದ್ದಾರ ಆಗುತ್ತಿಲ್ಲ ಎಂದರೆ ಇಂತಹ ಘಟನೆಗಳು ಕೂಡ ಕಾರಣ. ನಾನು ಈ ಬಗ್ಗೆ ಪ್ರಜ್ವಲ್ ಜೊತೆ ಮನುಷ್ಯರ ತರ ಮಾತನಾಡಬೇಕು, ಏಕೆಂದರೆ ಎಲ್ಲದಕ್ಕಿಂತ ಮನುಷ್ಯತ್ವ ಮುಖ್ಯ. ಈ ಸಿನಿಮಾ ಮೂಲಕ ಪ್ರಜ್ವಲ್ ಅವರಿಗೆ ದೊಡ್ಡ ಹೆಸರು ಬಂದರೆ ನನಗೇ ಹೆಮ್ಮೆ ಅನಿಸುತ್ತದೆ’ ಎಂದು ಹೇಳುವ ಮೂಲಕ ರಾಜ್ ಬಿ. ಶೆಟ್ಟಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *