ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟಿ ನಟಿಸಿ, ಗುರುದತ್ ಗಾಣಿಗಾ ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಿನಿಮಾ ವಿವಾದಕ್ಕೆ ಸಿಲುಕಿಕೊಂಡಿದೆ. ಸಿನಿಮಾ ತಂಡ, ಪ್ರಜ್ವಲ್ ದೇವರಾಜ್ ಅವರನ್ನು ಪಕ್ಕಕ್ಕೆ ಸರಿಸಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ ಎಂಬ ಆರೋಪ ಎದುರಾಗಿದೆ. ಸಿನಿಮಾಕ್ಕೆ ಪ್ರಜ್ವಲ್ ದೇವರಾಜ್ ಅವರಿಂದ ಡಬ್ಬಿಂಗ್ ಮಾಡಿಸಿಲ್ಲ, ಬದಲಿಗೆ ಬೇರೊಬ್ಬ ಕಲಾವದರಿಂದ ಡಬ್ಬಿಂಗ್ ಮಾಡಿಸಲಾಗಿದೆ. ಖುದ್ದು ನಿರ್ದೇಶಕ ಗುರುದತ್ ಗಾಣಿಗಾ ಅವರು ಪ್ರಜ್ವಲ್ ವಿರುದ್ಧ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಇದೆಲ್ಲದರ ನಡುವೆ ನಿರ್ದೇಶಕ, ಪ್ರಜ್ವಲ್ ದೇವರಾಜ್ ಅವರ ಆಪ್ತ ಗೆಳೆಯ ಪನ್ನಗಾಭರಣ ಅವರು ನಿರ್ದೇಶಕ ಗುರುದತ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪನ್ನಗಾಭರಣ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋನಲ್ಲಿ ‘ಕರಾವಳಿ’ ನಿರ್ದೇಶಕ ಗುರುದತ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ವಿಡಿಯೋನಲ್ಲಿ ಮಾತನಾಡಿರುವ ಪನ್ನಗಾಭರಣ, ‘ಕರಾವಳಿ’ ಸಿನಿಮಾದ ವಿವಾದದ ಬಗ್ಗೆ ಕೆಲ ವಿಡಿಯೋಗಳನ್ನು ನಾನು ನೋಡಿದೆ. ಗುರುದತ್ ಗಾಣಿಗಾ ಅವರು ಹೇಳಿದರು, ‘ನಾನು ಅಂಬರೀಶ್ ಅವರ ಜೊತೆ, ಸುದೀಪ್ ಅವರ ಜೊತೆ ಕೆಲಸ ಮಾಡಿದ್ದೀನಿ’ ಅಂತ. ಹೌದು, ನಾನು ಆ ಸಿನಿಮಾ ನೋಡಿದ್ದೀನಿ, ಮೆಚ್ಚಿಕೊಂಡಿದ್ದೀನಿ. ಆದರೆ ಆ ಸಿನಿಮಾಗಳಲ್ಲಿ ಆ ನಟರಿಗೆ ಹೇಳದೆ ಬೇರೆಯವರಿಂದ ಮಾಡಿಸಿ ರಿಲೀಸ್ ಮಾಡಲು ಗುರುದತ್ ಕೈಯಲ್ಲಿ ಆಗುತ್ತಿತ್ತಾ? ಹಾಗೆ ಮಾಡಿದ್ದರೆ ಆ ನಟರು ಒಪ್ಪಿಕೊಳ್ಳುತ್ತಿದ್ದರಾ?’ ಎಂದು ಪನ್ನಗ ಪ್ರಶ್ನೆ ಮಾಡಿದ್ದಾರೆ.
‘ನಿಮ್ಮ ಸಿನಿಮಾನಲ್ಲಿ ನಿಮಗೆ ಶಕ್ತಿಯಾಗಿ ರಾಜ್ ಬಿ ಶೆಟ್ಟಿ ಅವರಿದ್ದಾರೆ. ಅವರೊಬ್ಬ ನಿಜವಾದ ಸಿನಿಮಾ ಲವ್ವರ್, ವೈಯಕ್ತಿಕವಾಗಿ ನನಗೆ ಅವರ ಪರಿಚಯ ಇದೆ. ‘ಕರಾವಳಿ’ ಸಿನಿಮಾನಲ್ಲೇ ನಟಿಸಿರುವ ಮಿತ್ರ ಅವರು ಸಹ ಹೇಳಿದರು. ‘ನನಗೆ ಡಬ್ಬಿಂಗ್ ಮಾಡುವಾಗ ಕಷ್ಟ ಆಗುತ್ತಿತ್ತು, ಆಗ ರಾಜ್ ಬಿ ಶೆಟ್ಟಿ ನನ್ನ ಜೊತೆಗೆ ಇದ್ದು, ನನ್ನ ಸಂಭಾಷಣೆ ತಿದ್ದಿ ಡಬ್ಬಿಂಗ್ ಮಾಡಿದರು’ ಅಂತ. ಹಾಗಿರುವಾಗ ಅವರ ಸಹಾಯ ಪಡೆದು ಪ್ರಜ್ವಲ್ ಅವರ ಕೈಯಲ್ಲಿ ಯಾಕೆ ಡಬ್ಬಿಂಗ್ ಮಾಡಿಸಲಿಲ್ಲ. ಸಹಾಯ ಕೇಳಿದರೆ ಬೇಡ ಎನ್ನುವ ವ್ಯಕ್ತಿ ರಾಜ್ ಬಿ ಶೆಟ್ಟಿ ಅಲ್ಲ, ಹಾಗೆಯೇ ಹೊಸದನ್ನ ಕಲಿಯಲು ಹಿಂದೇಟು ಹಾಕುವ ವ್ಯಕ್ತಿ ಪ್ರಜ್ವಲ್ ದೇವರಾಜ್ ಅಲ್ಲ’ ಎಂದಿದ್ದಾರೆ ಪನ್ನಗಾಭರಣ.
‘ಆರ್ಥಿಕ ಸಮಸ್ಯೆಗಳ ಕಾರಣದಿಂದ ನೀವು ಪ್ರಜ್ವಲ್ ಅವರನ್ನು ದೂರ ಇಟ್ಟಿದ್ದೀರಿ, ಆದರೆ ಈಗ ಪ್ರಜ್ವಲ್ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದೀರಿ. ಪ್ರಜ್ವಲ್ ಅವರ ಕೈಯಲ್ಲಿ ಡಬ್ ಮಾಡಿಸಿ ಅವರ ಕೈಯಲ್ಲಿ ಡಬ್ಬಿಂಗ್ ಆಗುತ್ತಿಲ್ಲ ಎಂದು ಹೇಳಿದ್ದರೆ ಒಪ್ಪಿಕೊಳ್ಳಬಹುದಿತ್ತು. ನೀವು ಅವರನ್ನು ಡಬ್ಬಿಂಗಿಗೆ ಕರೆದೇ ಇಲ್ಲ. ಡಬ್ಬಿಂಗ್ ಮಾಡಿಸದೆ ಅವರ ಕೈಯಿಂದ ಆಗುವುದಿಲ್ಲ ಎಂದು ಹೇಳುವುದು ಸರಿಯಲ್ಲ. ಹೋಗಲಿ, ಪ್ರಜ್ವಲ್ ದೇವರಾಜ್ ಸೂಕ್ತ ಅಲ್ಲ ಅನ್ನೋದು ನಿಮಗೆ ಸಿನಿಮಾ ಮುಗಿದ ಬಳಿಕ ಗೊತ್ತಾಯ್ತ? ಸಿನಿಮಾ ಶುರು ಮಾಡುವ ಮುಂಚೆ ನೀವು ಮಾತುಕತೆ ಮಾಡಿರುತ್ತೀರಿ, ವರ್ಕ್ ಶಾಪ್ ಮಾಡಿರುತ್ತೀರಿ, ಆಗೆಲ್ಲ ಇಲ್ಲದ ಸಮಸ್ಯೆ ಈಗ ಬಂದಿರುವುದು ಏಕೆ?’ ಎಂದು ಪನ್ನಗಾಭರಣ ಪ್ರಶ್ನೆ ಮಾಡಿದ್ದಾರೆ.
‘ಒಬ್ಬ ಕಲಾವಿದನನ್ನು ಗೌರವಿಸಬೇಕು. ಅವರ ಅನುಮತಿ ಪಡೆಯದೇ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸುವುದು ತಪ್ಪು, ಈಗ ನಿಮ್ಮನ್ನು ಬಿಟ್ಟು ನಿಮ್ಮ ಸಿನಿಮಾ ರಿಲೀಸ್ ಮಾಡಿಸಿದರೆ ಅದು ಸರಿ ಅನಿಸುತ್ತಾ? ಅದನ್ನು ನೀವು ಒಪ್ಪಿಕೊಳ್ಳುತ್ತೀರ? ಹೀಗೆಲ್ಲ ಮಾಡಬೇಡಿ, ಸಿನಿಮಾ ಎಂಬುದು ಕುಟುಂಬದ ಥರ ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಸಮಸ್ಯೆಗಳಿದ್ದರೆ ಕೂತು ಮಾತನಾಡಿ ಬಗೆಹರಿಸಿಕೊಳ್ಳಿ’ ಎಂದು ಪನ್ನಗಾಭರಣ ಸಲಹೆ ನೀಡಿದ್ದಾರೆ.
