‘ಕರಾವಳಿ’ (Karavali) ಸಿನಿಮಾ ಇಂದು (ಜುಲೈ 24) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಸಂಪದಾ ಇನ್ನಿತರರು ನಟಿಸಿರುವ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ವಿವಾದದ ಕಾರಣಕ್ಕಾಗಿ ಈ ಸಿನಿಮಾ ಸುದ್ದಿಯಾಗಿತ್ತು. ಸಿನಿಮಾದ ನಾಯಕ ಪ್ರಜ್ವಲ್ ದೇವರಾಜ್ ಅವರಿಂದಿ ನಿರ್ದೇಶಕ ಗುರುದತ್ ಗಾಣಿಗಾ ಡಬ್ಬಿಂಗ್ ಮಾಡಿಸಿರಲಿಲ್ಲ. ಇದಕ್ಕೆ ಸಂಭಾವನೆ ಸಮಸ್ಯೆ ಕಾರಣ ಎನ್ನಲಾಗಿತ್ತು. ಇದೀಗ ಪ್ರಜ್ವಲ್ ದೇವರಾಜ್ ಅವರು ವಿವಾದದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ವಿವಾದಕ್ಕೆ ಸಂಭಾವನೆ ಕಾರಣವಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಜ್ವಲ್ ದೇವರಾಜ್, ‘ವಿವಾದಕ್ಕೆ ಸಂಭಾವನೆ ಸಹಿತ ಬೇರೆ ಹಲವು ವಿಷಯಗಳು ಕಾರಣ’ ಎಂದಿದ್ದಾರೆ. ನನಗೆ ಸಂಭಾವನೆ ಅಥವಾ ಹಣವೇ ಮುಖ್ಯ ಆಗಿದ್ದಿದ್ದರೆ ನಾನು ಒಂದೂವರೆ ಕೋಟಿ ಹಣವನ್ನು ಒಂದು ವರ್ಷ ಅವರ ಬಳಿ ಬಿಡುತ್ತಿರಲಿಲ್ಲ, ಕಳೆದ ವರ್ಷವೇ ಅದನ್ನು ಪಡೆದುಕೊಂಡು ಬಿಡುತ್ತಿದ್ದೆ. ಚಿತ್ರರಂಗದಲ್ಲಿರುವ ಎಲ್ಲರೂ ಫ್ಯಾಷನ್ಗಾಗಿ ಈ ರಂಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ, ಆದರೆ ಹಣವೂ ಸಹ ಅಷ್ಟೇ ಮುಖ್ಯ’ ಎಂದು ಪ್ರಜ್ವಲ್ ಹೇಳಿದ್ದಾರೆ.
‘ನಮ್ಮಿಬ್ಬರ (ನಿರ್ದೇಶಕ ಗುರುದತ್ ಗಾಣಿಗಾ) ಸಂಬಂಧ, ಕೆಲ ತಿಂಗಳ ಹಿಂದೆಯೇ ಹದಗೆಟ್ಟಿತ್ತು. ಇಂಥಹರದ್ದೇ ತಪ್ಪು ಎಂದು ನಾನು ಹೇಳಲಾರೆ. ಆದರೆ ಇಬ್ಬರ ನಡುವೆ ಮಾತುಕತೆ ಇಲ್ಲದಂತಾಗಿತ್ತು. ನಾನು ನನ್ನ ಮ್ಯಾನೇಜರ್ ಅನ್ನು ಅವರೊಟ್ಟಿಗೆ ವ್ಯವಹರಿಸಲು ಬಿಟ್ಟಿದ್ದೆ. ನನ್ನ ಹಣ ಕೊಟ್ಟರೆ ನಾನು ಡಬ್ಬಿಂಗ್ ಮುಗಿಸುತ್ತೇನೆ ಎಂದಿದ್ದೆ. ಆದರೆ ನಾನು ಟ್ರೈಲರ್ಗೆ ಡಬ್ಬಿಂಗ್ ಮಾಡಲು ರೆಡಿ ಇದ್ದೆ. ಟ್ರೈಲರ್ ಡಬ್ಬಿಂಗ್ ಮುಗಿಸಿ ಆ ಮೇಲೆ ಉಳಿದಿದ್ದು ನೋಡೋಣ ಎಂದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ನಾನೂ ಸಹ ಟ್ರೈಲರ್ಗಾಗಿ ಕಾತರದಿಂದ ಕಾಯುತ್ತಿದ್ದೆ’ ಎಂದಿದ್ದಾರೆ ಪ್ರಜ್ವಲ್.
ಇದನ್ನೂ ಓದಿ:‘ಕರಾವಳಿ’ ಸಿನಿಮಾದಲ್ಲಿ ಪಶುವೈದ್ಯೆಯ ಪಾತ್ರ ಮಾಡಿದ ಸಂಪದಾ
‘ನಾನು ಸಿನಿಮಾಗಳಿಗೆ ಒಪ್ಪಂದ ಮಾಡಿಕೊಳ್ಳುವುದು ಕಡಿಮೆ. ನೀವು ಕೊಟ್ಟಿರುವ ಮಾತು ನೀವು ಉಳಿಸಿಕೊಳ್ಳಿ, ನಾನು ಕೊಟ್ಟಿರುವ ಮಾತು ನಾನು ಉಳಿಸಿಕೊಳ್ಳುತ್ತೀನಿ ಎಂಬುದಷ್ಟೆ ಆಗಿತ್ತು. ಆದರೆ ಈ ಸಿನಿಮಾದ ಬಳಿಕ ಅನಿಸುತ್ತಿದೆ ಒಪ್ಪಂದ ಬಹಳ ಮುಖ್ಯ ಅಂತ. ನನಗೆ ಚಿತ್ರರಂಗದ ಹಲವರು ಕರೆ ಮಾಡಿ ಮಾತನಾಡಿದರು. ರಿಷಬ್ ಶೆಟ್ಟಿ, ಧ್ರುವ ಸರ್ಜಾ, ರಮ್ಯಾ, ರಕ್ಷಿತಾ, ನೆನಪಿರಲಿ ಪ್ರೇಮ್, ರಾಕ್ಲೈನ್ ವೆಂಕಟೇಶ್ ಇನ್ನೂ ಹಲವರು ಕರೆ ಮಾಡಿ ವಿಚಾರಿಸಿದರು. ಈಗಲೂ ನ್ಯಾಯ, ನಿಯಮ ನನ್ನ ಪರವಾಗಿದೆ, ಆದರೆ ನಾನು ಸಿನಿಮಾಕ್ಕೆ ಸಮಸ್ಯೆ ಕೊಡಬೇಕು ಎಂದುಕೊಳ್ಳುವ ವ್ಯಕ್ತಿಯಲ್ಲ. ಸಿನಿಮಾ ಚೆನ್ನಾಗಿ ಆಗಲಿ ಎಂಬುದಷ್ಟೆ ನನ್ನ ಹಾರೈಕೆ’ ಎಂದಿದ್ದಾರೆ ಪ್ರಜ್ವಲ್ ದೇವರಾಜ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ