ತಮಿಳು ಸ್ಟಾರ್ ನಟ ಸೂರ್ಯ (Suriya) ಅವರ ಇತ್ತೀಚಿನ ಚಿತ್ರ ‘ಕರುಪ್ಪು’ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿದೆ ಎನ್ನಲಾಗುತ್ತಿದೆ. ನಿರ್ದೇಶಕ ಆರ್ ಬಾಲಾಜಿಯಂತೂ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದಾರೆ. ನಟ ಸೂರ್ಯ ಅವರು, ಬಾಲಾಜಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ಸಹ ನೀಡಿದ್ದಾರೆ. ಸಿನಿಮಾ ಹಿಟ್ ಎಂದು ನಿರ್ದೇಶಕ, ನಟ ಹೇಳುತ್ತಿರುವಾಗಲೇ ಆ ಸಿನಿಮಾಕ್ಕೆ ಫೈನ್ಯಾನ್ಸ್ ಮಾಡಿದ ವ್ಯಕ್ತಿಯೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಹಾಕಿದ ಬಂಡವಾಳದ 50% ಮಾತ್ರವೆ ಮರಳಿ ಬಂದಿದೆ ಎಂದಿದ್ದಾರೆ. ಆ ಮೂಲಕ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಸುದ್ದಿಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ.
ತಮಿಳು ಚಿತ್ರರಂಗದ ಹಿರಿಯ ಫೈನಾನ್ಸಿಯರ್ ಮತ್ತು ವಿತರಕ ತಿರುಪುರ್ ಸುಬ್ರಮಣಿಯಂ ಸಂದರ್ಶನವೊಂದರಲ್ಲಿ ಮಾತನಾಡಿ, ತಾವು ಸಹ ‘ಕರಪ್ಪು’ ಸಿನಿಮಾದ ಮೇಲೆ ಹೂಡಿಕೆ ಮಾಡಿದ್ದು, ತಾವು ಹೂಡಿಕೆ ಮಾಡಿದ ಹಣದಲ್ಲಿ ಕೇವಲ ಅರ್ಧದಷ್ಟು ಮಾತ್ರ ವಾಪಸ್ ಬಂದಿದೆ ಎಂದಿದ್ದಾರೆ. ಅಲ್ಲದೆ, ಸಂದರ್ಶನದಲ್ಲಿ ಸಿನಿಮಾದ ನಿರ್ದೇಶಕ ಆರ್ಜೆ ಬಾಲಾಜಿ ವಿರುದ್ಧ ಆಕ್ರೋಶ ಮತ್ತು ಅಸಮಾಧಾನವನ್ನು ಸಹ ಹೊರ ಹಾಕಿದ್ದಾರೆ.
‘ಕರುಪ್ಪು’ ಸಿನಿಮಾ ಬಿಡುಗಡೆಗೆ ಅಡೆ-ತಡೆ ಎದುರಾಗಿತ್ತು. ನಿಗದಿತ ದಿನಾಂಕದಂದು ಸಿನಿಮಾ ಬಿಡುಗಡೆ ಆಗಲಿಲ್ಲ. ಆ ದಿನ ಕಾರಲ್ಲಿ ಕೂತು ವಿಡಿಯೋ ಮಾಡಿದ್ದ ನಿರ್ದೇಶಕ ಬಾಲಾಜಿ, ಕಣ್ಣೀರು ಹಾಕಿದ್ದರು. ಈ ಬಗ್ಗೆ ತಿರುಪುರ್ ಸುಬ್ರಹ್ಮಣಿಯಂ ಅವರು ಟೀಕೆ ಮಾಡಿದ್ದು, ಶ್ರೀ ಶಕ್ತಿ ಸಿನೆಮಾಸ್ ಯೂಟ್ಯೂಬ್ ಚಾನೆಲ್ನಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿರುವ ಅವರು, ‘ಬಿಡುಗಡೆಗೆ ಎರಡು ದಿನಗಳ ಮೊದಲು ನಾವು ಎದುರಿಸಿದ ಸಮಸ್ಯೆಗಳ ಬಗ್ಗೆ ನಮಗೆ ತಿಳಿದಿದೆ. ನಿರ್ದೇಶಕರು ನಮ್ಮೊಂದಿಗೆ ಬಂದು ಆ ಸಮಸ್ಯೆಗಳನ್ನು ಎದುರಿಸಬೇಕಿತ್ತು, ಆದರೆ ಅವರು ಅದಕ್ಕೆ ಬದಲಾಗಿ ಕಾರಿನಲ್ಲಿ ಕುಳಿತು ಅಳುತ್ತಿರುವ ವಿಡಿಯೋ ಮಾಡಿಕೊಂಡರು. ಈಗ ಸಿನಿಮಾ ಹಿಟ್ ಆಗಿದೆ ಎಂದು ನಿರ್ದೇಶಕರು ಬೀಗುತ್ತಿದ್ದಾರೆ. ಆದರೆ, ಸಿನಿಮಾ ತೆರೆ ಕಾಣಲು ನಟ ಸೂರ್ಯ ಮಾತ್ರ ಮುಂದೆ ಬಂದು ಸಹಾಯ ಮಾಡಿದರು. ಸೂರ್ಯ ಅವರನ್ನು ಬಿಟ್ಟರೆ, ಸಮಸ್ಯೆಯನ್ನು ಬಗೆಹರಿಸಲು ಬೇರೆ ಯಾರೂ ಮುಂದೆ ಬರಲಿಲ್ಲ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಬಾಲಿವುಡ್ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?
‘ಈ ಚಿತ್ರವು 2025ರ ದೀಪಾವಳಿಗೆ ಬಿಡುಗಡೆಯಾಗಬೇಕಿತ್ತು, ಆದರೆ ಎಂಟು ತಿಂಗಳ ನಂತರ ಬಿಡುಗಡೆಯಾಯಿತು. ₹30-40 ಕೋಟಿ ಬಜೆಟ್ ಎಂದು ಹೇಳುತ್ತಾರೆ, ಅದು 45 ಕೋಟಿಯವರೆಗೆ ಹೋದರೆ ಪರವಾಗಿಲ್ಲ, ಆದರೆ ಅದು 80 ಕೋಟಿಗೆ ತಲುಪಿದರೆ ಏನು ಮಾಡಲು ಸಾಧ್ಯ? ಇದು ನಿರ್ಮಾಪಕರು ಮತ್ತು ಫೈನಾನ್ಸಿಯರ್ಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಈ ಚಿತ್ರದ ಬಿಡುಗಡೆಗಾಗಿ ನಾನು ನನ್ನ ಸ್ವಂತ ಹಣವನ್ನು ಹೂಡಿಕೆ ಮಾಡಿದ್ದೆ. ಅದರಲ್ಲಿ ನನಗೆ ಸಿಕ್ಕಿದ್ದು ಕೇವಲ 50 ಪ್ರತಿಶತ ಮಾತ್ರ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕರುಪ್ಪು’ ಚಿತ್ರವು ಮೂಲತಃ ಮೇ 14 ರಂದು ಬಿಡುಗಡೆಯಾಗಬೇಕಿತ್ತು ಮತ್ತು ಮುಖ್ಯಮಂತ್ರಿ ವಿಜಯ್ ಅವರು ಬೆಳಿಗ್ಗೆ 9 ಗಂಟೆಯ ಪ್ರದರ್ಶನಕ್ಕೆ ಅನುಮೋದನೆ ನೀಡಿದ್ದರು. ಆದರೆ, ಕೊನೆಯ ನಿಮಿಷದಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ರಾಜ್ಯದಾದ್ಯಂತ ಚಿತ್ರಮಂದಿರಗಳು “ಅನಿವಾರ್ಯ ಕಾರಣಗಳು” ಮತ್ತು “ಆರ್ಥಿಕ ಕಾರಣಗಳಿಂದಾಗಿ” ಪ್ರದರ್ಶನಗಳನ್ನು ರದ್ದುಗೊಳಿಸುತ್ತಿರುವುದಾಗಿ ಘೋಷಿಸಿದ್ದವು. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ನೀಡಬೇಕಿದ್ದ 10 ಕೋಟಿ ಬಾಕಿ ಪಾವತಿಯಾಗದಿದ್ದೇ ಈ ವಿಳಂಬಕ್ಕೆ ಕಾರಣವಾಗಿತ್ತು. ತಮಿಳು ಚಿತ್ರರಂಗದಲ್ಲಿ, ಬಾಕಿ ಹಣ ಪಾವತಿಯಾಗುವವರೆಗೆ ವಿತರಕರು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅಗತ್ಯವಾದ ಡಿಜಿಟಲ್ ಕೀಯನ್ನು (KDM) ತಡೆಹಿಡಿಯುವುದು ಸಾಮಾನ್ಯ. ಅಂತಿಮವಾಗಿ ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯಿತು. ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ