ಕರೆಂಟ್, ನೀರು ಆಯ್ತು ಈಗ ಹಾಸ್ಪಿಟಲ್ ಬಿಲ್ ಸರದಿ: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರವೂ ದುಬಾರಿ – Kannada News | Minimum Wage Hike Pushes Private Hospitals to Increase Treatment Fees

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಜುಲೈ 01: ಕರೆಂಟ್, ನೀರಿನ ದರ ಏರಿಕೆ ಮಧ್ಯೆ ಇದೀಗ ಖಾಸಗಿ ಆಸ್ಪತ್ರೆಗಳ (Private Hospitals) ಚಿಕಿತ್ಸಾ ದರವು ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ಸರ್ಕಾರ ಕನಿಷ್ಠ ಕಾರ್ಮಿಕ ವೇತನವನ್ನು ಶೇ.60ರಷ್ಟು ಹೆಚ್ಚಿಸಿದ ಹಿನ್ನೆಲೆ, ಆಸ್ಪತ್ರೆಗಳ ನಿರ್ವಹಣಾ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಅಂತ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಚಿಕಿತ್ಸಾ ದರ ಏರಿಕೆಗೆ ಮುಂದಾಗಿದೆ.

ಕನಿಷ್ಠ ವೇತನ ಹೆಚ್ಚಳ: ಖಾಸಗಿ ಆಸ್ಪತ್ರೆಗಳಿಗೆ ಆರ್ಥಿಕ ಹೊರೆ 

ರಾಜಧಾನಿಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಲಕ್ಷಣಗಳು ಕಾಣಿಸುತ್ತಿವೆ. ಕನಿಷ್ಠ ವೇತನವನ್ನು ಸರ್ಕಾರ ಶೇ.60ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಖಾಸಗಿ ಆಸ್ಪತ್ರೆಗಳ ಮೇಲೆ ಭಾರೀ ಆರ್ಥಿಕ ಹೊರೆ ತಂದಿದೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಆರೋಪಿಸಿದೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯ ವೈದ್ಯರ ಕಳ್ಳಾಟಕ್ಕೆ ಬ್ರೇಕ್: ಇನ್ಮುಂದೆ ಸಿಬ್ಬಂದಿ ಹಾಜರತಿಗೆ ವೇತನ ಲಿಂಕ್!

ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ ಬೆಂಗಳೂರಿನಲ್ಲಿ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಟ 23,376 ರೂಪಾಯಿ ವೇತನ ನಿಗದಿಯಾಗಿದೆ. ಇದರಿಂದ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್‌ಗಳು, ಸಪೋರ್ಟ್ ಸ್ಟಾಫ್, ಜೂನಿಯರ್ ಮೆಡಿಕಲ್ ಸಿಬ್ಬಂದಿ ಸೇರಿದಂತೆ ಬಹುತೇಕ ಉದ್ಯೋಗಿಗಳ ವೇತನದಲ್ಲಿ ಏರಿಕೆಯಾಗಲಿದ್ದು, ಆಸ್ಪತ್ರೆಗಳ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಲಿದೆ ಅಂತ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಆಕ್ರೋಶ ವ್ಯಕ್ತಪಡಿಸಿದೆ.

ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ ಶೋಭಾ ಪ್ರಕಾಶ್​ ಹೇಳಿದ್ದಿಷ್ಟು

ಈಗಾಗಲೇ ವಿದ್ಯುತ್ ದರ, ನೀರಿನ ದರ ಸೇರಿದಂತೆ ವಿವಿಧ ಕಾರ್ಯಾಚರಣಾ ವೆಚ್ಚಗಳು ಹೆಚ್ಚಿರುವ ಪರಿಸ್ಥಿತಿಯಲ್ಲಿ, ಏಕಾಏಕಿ ಕನಿಷ್ಠ ವೇತನವನ್ನು ಶೇ.60ರಷ್ಟು ಹೆಚ್ಚಿಸಿರುವುದು ಮಧ್ಯಮ ಮತ್ತು ಸಣ್ಣ ಆಸ್ಪತ್ರೆಗಳ ನಿರ್ವಹಣೆ ಸವಾಲಾಗಿದೆ. ಹೀಗಾಗಿ ಸರ್ಕಾರ ಕನಿಷ್ಠ ವೇತನದ ಆದೇಶವನ್ನು ಮರುಪರಿಶೀಲಿಸಿ ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ ಚಿಕಿತ್ಸಾ ದರ ಹೆಚ್ಚಿಸುವುದು ಆಸ್ಪತ್ರೆಗಳಲ್ಲಿ ಅನಿವಾರ್ಯವಾಗಲಿದೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ ಶೋಭಾ ಪ್ರಕಾಶ್​ ಹೇಳಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆ ಪಡೆದ್ರೂ ಮಕ್ಕಳಾಗಿಲ್ಲ: ರಾಯಚೂರು ಖಾಸಗಿ ಐವಿಎಫ್ ಮಾಫಿಯಾ ಬಯಲು

ಇನ್ನೊಂದೆಡೆ, ಆಸ್ಪತ್ರೆಗಳಷ್ಟೇ ಅಲ್ಲದೆ ವಿವಿಧ ಕೈಗಾರಿಕಾ ವಲಯ ಕೂಡ ಕನಿಷ್ಠ ವೇತನ ಹೆಚ್ಚಳದ ಆದೇಶವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು, ಹೋಟೆಲ್ ಉದ್ಯಮವು ಇದರ ವಿರುದ್ಧ ಕೋರ್ಟ್ ಮೊರೆ ಕೂಡ ಹೋಗಿದೆ. ಒಟ್ಟಿನಲ್ಲಿ ಕಾರ್ಮಿಕರ ಕನಿಷ್ಠ ವೇತನ ಏರಿಕೆಗೆ ಎಲ್ಲ ವಲಯಗಳಿಂದ ವ್ಯಾಪಕರ ವಿರೋಧ ಶುರುವಾಗಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *