ನವದೆಹಲಿ, ಜುಲೈ 24: ಕರ್ನಾಟಕದ ರೈಲ್ವೆ ಯೋಜನೆ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ (Cabinet Meeting) ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸಂಪುಟ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಸಂಪರ್ಕಿಸುವ 1,264 ಕೋಟಿ ರೂ. ವೆಚ್ಚದ ಬಳ್ಳಾರಿ-ಗುಂತಕಲ್ (Ballari-Guntakal Railway lines) ರೈಲ್ವೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಗುಂತಕಲ್ ನಡುವೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗಗಳನ್ನು ನಿರ್ಮಿಸುವ 1,264 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು (CCEA) ಅನುಮೋದನೆ ನೀಡಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಒಟ್ಟು ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಯೋಜನೆಯು ಭಾರತೀಯ ರೈಲ್ವೆ ಜಾಲವನ್ನು ಸುಮಾರು 46 ಕಿ.ಮೀ ನಷ್ಟು ವಿಸ್ತರಿಸಲಿದ್ದು, ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಸುಮಾರು 99 ಗ್ರಾಮಗಳಿಗೆ ಸಾರಿಗೆ ಸಂಪರ್ಕವನ್ನು ಸುಧಾರಿಸಲಿದೆ.
ಪಿಎಂ ಗತಿ ಶಕ್ತಿ ರಾಷ್ಟ್ರೀಯ ಬೃಹತ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ 46 ಕಿ.ಮೀ ಉದ್ದದ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು, ರೈಲು ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವುದು, ಸರಕು ಸಾಗಣೆಯನ್ನು ಸುಗಮಗೊಳಿಸುವುದು ಮತ್ತು ಬಹುಮಾದರಿ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, 2028-29ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
