ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್Image Credit source: PTI
ಬೆಂಗಳೂರು, ಆಗಸ್ಟ್ 16: ಮುಂದಿನ ಎರಡು ದಶಕದಲ್ಲಿ ಕರ್ನಾಟಕದ ಆರ್ಥಿಕತೆಯನ್ನು (Karnataka GDP) ಆರು ಪಟ್ಟು ಹೆಚ್ಚಿಸುವ ಹೆಗ್ಗುರಿಯನ್ನು ಸಿಎಂ ಡಿ.ಕೆ. ಶಿವಕುಮಾರ್ (D K Shivakumar) ಪ್ರಕಟಿಸಿದ್ದಾರೆ. ನಿನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಹತ್ವಾಕಾಂಕ್ಷಿ ಗುರಿಯನ್ನು ಬಿಚ್ಚಿಟಿದ್ದಾರೆ. 2047ಕ್ಕೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಜಿಡಿಪಿಯ ರಾಜ್ಯವನ್ನಾಗಿ ಮಾಡುವುದು ಸೇರಿದಂತೆ ವಿವಿಧ ಗುರಿ ಮತ್ತು ಯೋಜನೆಗಳನ್ನು ಸಿಎಂ ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.
ಒಂದು ಲಕ್ಷ ಉದ್ಯೋಗಸೃಷ್ಟಿ ನಿರೀಕ್ಷೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯ ನಿರ್ಮಾಣಕ್ಕೆ ಪೂರಕವಾಗುವ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ‘ಉದ್ಯೋಗ ಸಂಕಲ್ಪ’ ಮತ್ತು ‘ಉದ್ಯೋಗ ನಿಧಿ’ ಯೋಜನೆಗಳು. ಇವುಗಳ ಮೂಲಕ ರಾಜ್ಯದಲ್ಲಿ ಸದ್ಯೋಭವಿಷ್ಯದಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಆರ್ಥಿಕವಾಗಿ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಿಗೆ ಪ್ರತಿ ಉದ್ಯೋಗಕ್ಕೆ ₹2,500 ಪ್ರೋತ್ಸಾಹಧನ ನೀಡಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಮತ್ತು ಶಿಕ್ಷಣ
- ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣವನ್ನು ಪರಿಚಯಿಸಲಾಗುವುದು.
- ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ ಸ್ಥಾಪನೆ.
- ರಾಜ್ಯದಾದ್ಯಂತ ತಂತ್ರಜ್ಞಾನ ಇಕೋಸಿಸ್ಟಂ ಬಲಪಡಿಸಲು AI ಕೇಂದ್ರಗಳನ್ನು (AI Hubs) ಸ್ಥಾಪಿಸಲಾಗುವುದು.
ಇದನ್ನೂ ಓದಿ: ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ
ಬೆಂಗಳೂರು ಹೊರಗಿನ ಅಭಿವೃದ್ಧಿ
‘ಬಿಯಾಂಡ್ ಬೆಂಗಳೂರು’ (Beyond Bengaluru) ಉಪಕ್ರಮದಡಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ 20,000 ಕೋಟಿ ರೂ ವೆಚ್ಚದಲ್ಲಿ ಸುಧಾರಿತ ತಯಾರಿಕಾ ಕ್ಲಸ್ಟರ್ ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಒಂದು ಲಕ್ಷ ಉದ್ಯೋಗಸೃಷ್ಟಿಯ ನಿರೀಕ್ಷೆ ಇದೆ ಎಂದು ಡಿಕೆ ಶಿವಕುಮಾರ್ ವಿವರಿಸಿದ್ದಾರೆ.
ಇತರೆ ಘೋಷಣೆಗಳು
- ಬೆಂಗಳೂರು ಪೊಲೀಸ್ ಆಯುಕ್ತಾಲಯವನ್ನು ಐದು ಪ್ರತ್ಯೇಕ ಭಾಗಗಳಾಗಿ ಮಾಡಿ ನಗರದ ಪೊಲೀಸ್ ಆಡಳಿತ ವ್ಯವಸ್ಥೆಯನ್ನು ಪುನರ್ ಸಂಘಟಿಸುವುದು.
- ರಾಜ್ಯ ಸರ್ಕಾರಿ ಸ್ವಾಮ್ಯದ ‘ಮೋಟಾರ್ ವಾಹನ ವಿಮಾ ನಿಗಮ’ ಸ್ಥಾಪಿಸುವ ಪ್ರಸ್ತಾವನೆ.
- ಕೃಷಿ ವಲಯದಲ್ಲಿ ರೈತ ಚೈತನ್ಯ ಯೋಜನೆಯಲ್ಲಿ ಬೆಳೆ ಸಮೀಕ್ಷೆಗೆ ಡ್ರೋನ್ ಮತ್ತು ಇಮೇಜರಿ ಬಳಕೆ
- ರೈತ ಮಿತ್ರ ಯೋಜನೆಯಡಿ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳಿಗೆ ಶೇ. 50 ಸಬ್ಸಿಡಿ.
ಇದನ್ನೂ ಓದಿ: ಭಾರತದ 5ನೇ ತಲೆಮಾರಿನ ಫೈಟರ್ ಜೆಟ್ಗೆ ದೇಶೀಯ ಇಂಜಿನ್ ಅಭಿವೃದ್ಧಿ: ರಿಲಯನ್ಸ್, ರೋಲ್ಸ್ ರಾಯ್ಸ್ ಪಾಲುದಾರಿಕೆ
ಈ ಯೋಜನೆಯು ರಾಜ್ಯದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಮತ್ತು ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸಿದೆ. ಕರ್ನಾಟಕದ ಆರ್ಥಿಕತೆ ಸದ್ಯ 500 ಬಿಲಿಯನ್ ಡಾಲರ್ ಹತ್ತಿರ ಹತ್ತಿರ ಇದೆ. ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇ. 9-10ರಷ್ಟು ಇದೆ. ಜಿಎಸ್ಟಿ ಸಂಗ್ರಹ, ತಲಾದಾಯ ಇತ್ಯಾದಿಗಳಲ್ಲೂ ಕರ್ನಾಟಕ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಹೀಗಾಗಿ, ಕರ್ನಾಟಕ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಇಟ್ಟಿರುವುದು ಅಸಾಧ್ಯದ ಗುರಿ ಎನಿಸುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ