ಬೆಂಗಳೂರು, ಆಗಸ್ಟ್ 10: ಕಳೆದ ಒಂದು ವಾರದಿಂದ ಕರ್ನಾಟಕದ ಕೆಲವೆಡೆ ಭಾರಿ ಮಳೆಯಾಗುತ್ತಿದ್ದರೂ ರಾಜ್ಯದ ಮಳೆ ಕೊರತೆ ಮಾತ್ರ ಕಡಿಮೆಯಾಗಿಲ್ಲ. ಜೂನ್ 1ರಿಂದ ಆರಂಭವಾದ ಮುಂಗಾರು ಅವಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಅತ್ಯಂತ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಒಂದಾಗಿದ್ದು, ಶೇ.34ರಷ್ಟು ಕೊರತೆ ದಾಖಲಾಗಿದೆ. ಆಗಸ್ಟ್ 9ರವರೆಗೆ ಜಿಲ್ಲೆಯಲ್ಲಿ 127 ಮಿ.ಮೀ ಮಳೆಯಾಗಿದ್ದು, ಈ ಅವಧಿಯಲ್ಲಿ ವಾಡಿಕೆಯಂತೆ 197 ಮಿ.ಮೀ ಮಳೆಯಾಗಬೇಕಿತ್ತು.
ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆ
ವಿಜಯನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಡಿಕೆ ಮಳೆಯ ಅರ್ಧಕ್ಕಿಂತಲೂ ಕಡಿಮೆ ಮಳೆಯಾಗಿದೆ. ವಿಜಯನಗರದಲ್ಲಿ ಶೇ.58 ಮತ್ತು ಮೈಸೂರಿನಲ್ಲಿ ಶೇ.51ರಷ್ಟು ಮಳೆ ಕೊರತೆ ದಾಖಲಾಗಿದೆ. ಚಾಮರಾಜನಗರದಲ್ಲಿ ಶೇ.47, ಕೋಲಾರದಲ್ಲಿ ಶೇ.42 ಹಾಗೂ ಬಳ್ಳಾರಿಯಲ್ಲಿ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದ್ದು, ಈ ಜಿಲ್ಲೆಗಳೂ ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆ ಇದೆ. ರಾಜ್ಯವು 656.7 ಮಿ.ಮೀ ವಾಡಿಕೆ ಮಳೆಯ ಎದುರು 517.8 ಮಿ.ಮೀ ಮಳೆಯನ್ನು ಮಾತ್ರ ಪಡೆದಿದೆ. ಮುಂಗಾರು ಆರಂಭವಾದಾಗಿನಿಂದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ದಾಖಲಾಗಿದೆ. ಆದರೆ, ಈ ಮಳೆಯಿಂದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಮಲೆನಾಡಿನಲ್ಲೂ ಪರಿಸ್ಥಿತಿ ಕಳವಳಕಾರಿ
ರಾಜ್ಯದ ಪ್ರಮುಖ ನದಿಗಳ ಜಲಾನಯನ ಪ್ರದೇಶಗಳಾಗಿರುವ ಮಲೆನಾಡು ಜಿಲ್ಲೆಗಳಲ್ಲೂ ಪರಿಸ್ಥಿತಿ ಕಳವಳಕಾರಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಸುಮಾರು ಶೇ.31ರಿಂದ 34ರಷ್ಟು ಕಡಿಮೆ ಮಳೆಯಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
