ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆImage Credit source: tv9
ಬೆಂಗಳೂರು, ಜೂನ್ 16: ರಾಜ್ಯದಲ್ಲಿ ಈ ವರ್ಷ ಮುಂಗಾರು (Monsoon Rain) ಆರಂಭದಲ್ಲೇ ಆತಂಕ ಮೂಡಿಸಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ಕರ್ನಾಟಕ ಒಟ್ಟಾರೆ ಶೇಕಡಾ 21 ರಷ್ಟು ಮಳೆ ಕೊರತೆಯನ್ನು ಎದುರಿಸಿದೆ. ಅದರಲ್ಲೂ ವಿಶೇಷವಾಗಿ, ಹೆಚ್ಚು ಮಳೆಯಾಗುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕ್ರಮವಾಗಿ ಶೇ 41 ಮತ್ತು ಶೇ 36 ರಷ್ಟು ಮಳೆ ಅಭಾವ ಸೃಷ್ಟಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಖ್ಯಾಂಶಗಳು
- ಕರಾವಳಿ, ಮಲೆನಾಡಿನಲ್ಲಿ ತೀವ್ರ ಮಳೆ ಕೊರತೆ
- ಬರಿದಾಗುತ್ತಿರುವ ಪ್ರಮುಖ ಡ್ಯಾಂಗಳು
- ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದ ಸರ್ಕಾರ
ಜೂನ್ 4 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತಾದರೂ, ಜೂನ್ 15 ರವರೆಗೆ ದಾಖಲಾಗಬೇಕಿದ್ದ 85.5 ಮಿಮೀ ವಾಡಿಕೆ ಮಳೆಯ ಬದಲಿಗೆ ಕೇವಲ 67 ಮಿಮೀ ಮಳೆಯಾಗಿದೆ. ಎಲ್ ನಿನೋ ಪರಿಣಾಮದಿಂದಾಗಿ ಈ ಬಾರಿ ಮುಂಗಾರು ಮಾರುತಗಳು ಅತ್ಯಂತ ದುರ್ಬಲವಾಗಿವೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ.
ಸದ್ಯಕ್ಕೆ ಅರಬ್ಬಿ ಸಮುದ್ರದಲ್ಲಿ ಯಾವುದೇ ವಾಯುಭಾರ ಕುಸಿತದ ಮುನ್ಸೂಚನೆ ಇಲ್ಲದಿರುವುದರಿಂದ ಕರಾವಳಿ ತೀರ ಒಣಹವೆಯಿಂದ ಕೂಡಿದೆ. ಇದರ ಜೊತೆಗೆ ರಾಜ್ಯದ ಶೇ 82 ರಷ್ಟು ಭಾಗದಲ್ಲಿ 30 ರಿಂದ 36 ಡಿಗ್ರಿ ಸೆಲ್ಶಿಯಸ್ ತಾಪಮಾನವಿದ್ದರೆ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಶಿಯಸ್ನಿಂದ 40.5 ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುತ್ತಿದ್ದು, ಬೇಸಿಗೆಯ ವಾತಾವರಣ ಮುಂದುವರಿದಿದೆ.
ಜಲಾಶಯಗಳು ಖಾಲಿ ಖಾಲಿ
ಕೆಆರ್ಎಸ್ ಡ್ಯಾಂ ಬ್ಯಾಕ್ವಾಟರ್ ಪ್ರದೇಶದಲ್ಲಿ ನೀರು ಕಡಿಮೆಯಾಗಿರುವುದು
ಮಳೆಯ ಕೊರತೆ ಮತ್ತು ತೀವ್ರ ಶಾಖದಿಂದಾಗಿ ರಾಜ್ಯದ 14 ಪ್ರಮುಖ ಜಲಾಶಯಗಳ ನೀರು ವೇಗವಾಗಿ ಖಾಲಿಯಾಗುತ್ತಿದೆ. ಒಟ್ಟು 896 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯಗಳಲ್ಲಿ ಪ್ರಸ್ತುತ ಕೇವಲ 206 ಟಿಎಂಸಿ (ಶೇ. 23) ನೀರು ಮಾತ್ರ ಉಳಿದಿದೆ. ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಕೇವಲ 34 ಟಿಎಂಸಿ ನೀರಿದ್ದರೆ (ಕಳೆದ ವರ್ಷ 77 ಟಿಎಂಸಿ ಇತ್ತು), ಕೃಷ್ಣಾ ಕೊಳ್ಳದ 6 ಜಲಾಶಯಗಳಲ್ಲಿ ಒಟ್ಟು 423 ಟಿಎಂಸಿ ಸಂಗ್ರಹ ಸಾಮರ್ಥ್ಯ ಇದ್ದು, ಕೇವಲ 94 ಟಿಎಂಸಿ ನೀರಿದೆ.
ಇದನ್ನೂ ಓದಿ: ಕರ್ನಾಟಕ ಸೇರಿ ದೇಶಾದ್ಯಂತ ಮುಂಗಾರು ಕೊರತೆ: 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ
ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಸದ್ಯಕ್ಕೆ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಲು ಆದ್ಯತೆ ನೀಡಲಾಗುವುದು. ಜುಲೈ ಮೊದಲ ವಾರದಲ್ಲಿ ಜಲಾಶಯಗಳ ಮಟ್ಟವನ್ನು ಪರಿಶೀಲಿಸಿ ಬರ ಪರಿಸ್ಥಿತಿಯ ಘೋಷಣೆಯ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ವಿಭಾಗ) ಕಮಿಷನರ್ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಕೃಷಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಮುನ್ನೆಚ್ಚರಿಕೆ ತುರ್ತು ಯೋಜನೆಗಳನ್ನು ಪಾಲಿಸಲು ಸೂಚಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
