ಬೆಂಗಳೂರು, ಆ.4: ಭಾರತ ಮತ್ತು ಅಮೆರಿಕ (India-US) ನಡುವೆ ಸ್ವಚ್ಛ ಇಂಧನ (Clean Energy) ಹಾಗೂ ಜೈವಿಕ ಇಂಧನ (Bioenergy) ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ (KSBDB) ಅಧ್ಯಕ್ಷ ಎಸ್.ಇ. ಸುಧೀಂದ್ರ ಅವರು ಅಮೆರಿಕದ ಮ್ಯಾಪಿಲ್ಯಾಂಡ್ (Maryland) ರಾಜ್ಯದ ಗವರ್ನರ್ ವೆಸ್ ಮೂರ್ (Wes Moore) ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಅಮೆರಿಕನ್ ತೆಲುಗು ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಅಮೆರಿಕದ ತೆಲುಗು-ಇಂಡಿಯನ್ ಸಮುದಾಯದ ಪ್ರಮುಖ ನಾಯಕರು ಈ ಉನ್ನತ ಮಟ್ಟದ ಭೇಟಿಯಲ್ಲಿ ಭಾಗವಹಿಸಿದ್ದರು.
ಜೈವಿಕ ಇಂಧನ ಹಂಚಿಕೆಗೆ ಕರ್ನಾಟಕ ಹಾಗೂ ಮ್ಯಾಪಿಲ್ಯಾಂಡ್ ನಡುವೆ ಚರ್ಚೆ
ಜಾಗತಿಕ ಇಂಧನ ಭದ್ರತೆ ಹಾಗೂ ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸುವಲ್ಲಿ ಜೈವಿಕ ಇಂಧನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗವರ್ನರ್ ವೆಸ್ ಮೂರ್ ಈ ವೇಳೆ ಪ್ರತಿಪಾದಿಸಿದರು. ಸ್ವಚ್ಛ ಇಂಧನ ನೀತಿಗೆ ಬದ್ಧತೆ ವ್ಯಕ್ತಪಡಿಸಿದ ಅವರು, ಕರ್ನಾಟಕದೊಂದಿಗೆ ಪಾಲುದಾರಿಕೆ ಹೊಂದಲು ತೀವ್ರ ಆಸಕ್ತಿ ವ್ಯಕ್ತಪಡಿಸಿದರು.
ಕೃಷಿ ತ್ಯಾಜ್ಯ ಹಾಗೂ ಜೈವಿಕ ಭಸ್ಮವನ್ನು (Biomass) ಮೌಲ್ಯಯುತ ಶಕ್ತಿ ಸಂಪನ್ಮೂಲವಾಗಿ ಪರಿವರ್ತಿಸುವಲ್ಲಿ ಕರ್ನಾಟಕವು ಭಾರತದಲ್ಲೇ ಮುಂಚೂಣಿಯಲ್ಲಿದೆ ಎಂದು KSBDB ಅಧ್ಯಕ್ಷ ಎಸ್.ಇ. ಸುಧೀಂದ್ರ ವಿವರಣೆ ನೀಡಿದರು. ಈ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಇಂಧನ ಭದ್ರತೆಗೆ ಕೊಡುಗೆ ನೀಡುತ್ತಿವೆ ಎಂದರು.
ಇದನ್ನೂ ಓದಿ: ಕೆಆರ್ಎಸ್, ಆಲಮಟ್ಟಿಗೆ ಬೃಹತ್ ಒಳಹರಿವು! ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿರುವ ಜೈವಿಕ ಇಂಧನ ಯೋಜನೆಗಳನ್ನು ಹತ್ತಿರದಿಂದ ವೀಕ್ಷಿಸಲು ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಗವರ್ನರ್ ವೆಸ್ ಮೂರ್ ಹಾಗೂ ಅವರ ಉನ್ನತ ನಿಯೋಗಕ್ಕೆ ಸುಧೀಂದ್ರ ಅವರು ಕರ್ನಾಟಕಕ್ಕೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ