ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ – Kannada News | Ex India Pacer Vinay Kumar Appointed Karnataka Cricket Head Coach

ರಣಜಿ ಟ್ರೋಫಿಯ ಹಾಲಿ ರನ್ನರ್ ಅಪ್ ಆಗಿರುವ ಕರ್ನಾಟಕ ತಂಡ (Karnataka Ranji team) ಮುಂಬರುವ ದೇಶೀಯ ಸೀಸನ್​ಗೆ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಅದರ ಭಾಗವಾಗಿ ತಂಡಕ್ಕೆ ಮುಖ್ಯ ಕೋಚ್ ಅನ್ನು ನೇಮಕ ಮಾಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಟೀಂ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ವಿನಯ್ ಕುಮಾರ್ (Vinay Kumar) ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಕರ್ನಾಟಕದ ಅತ್ಯಂತ ಯಶಸ್ವಿ ನಾಯಕರಾಗಿದ್ದ 42 ವರ್ಷದ ವಿನಯ್ ಕುಮಾರ್ ಅವರನ್ನು ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಶಿ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರನ್ನೊಳಗೊಂಡ ಕ್ರಿಕೆಟ್ ಆಡಳಿತ ಸಮಿತಿ ಮುಖ್ಯ ಕೋಚ್ ಹುದ್ದೆಗೆ ಆಯ್ಕೆ ಮಾಡಿದೆ.

ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ

ಈ ಮೊದಲು ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ಯೆರೆ ಗೌಡ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಆ ಸ್ಥಾನವನ್ನು ತುಂಬಲಿದ್ದಾರೆ. ವಿನಯ್ ಕುಮಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸುವುದರ ಜೊತೆಗೆ ಕರ್ನಾಟಕದ ಮಾಜಿ ಬ್ಯಾಟ್ಸ್‌ಮನ್ ದೀಪಕ್ ಚೌಗುಲೆ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.

ಆಟಗಾರನಾಗಿ ಟೀಂ ಇಂಡಿಯಾದಲ್ಲಿ ಹಾಗೂ ರಾಜ್ಯ ತಂಡದಲ್ಲಿ ಸಾಕಷ್ಟು ಪಂದ್ಯಗಳನ್ನಾಡಿದ್ದ ವಿನಯ್ ಕುಮಾರ್ ಕೊಚ್ ಆಗಿಯೂ ಅನುಭವ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿರುವ ವಿನಯ್, ಐಎಲ್‌ಟಿ 20 ಯಲ್ಲಿ ಎಂಐ ಎಮಿರೇಟ್ಸ್‌ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಅನುಭವಿ ವೀಕ್ಷಕ ವಿವರಣೆಗಾರರಾಗಿರುವ ವಿನಯ್, ಮುಂಬರುವ ರಣಜಿ ಸೀಸನ್​ನಲ್ಲಿ ತಂಡವನ್ನು ತಮ್ಮ ನೇತೃತ್ವದಲ್ಲಿ ಮುನ್ನಡೆಸಲಿದ್ದಾರೆ. ರಣಜಿ ಟ್ರೋಫಿಯಲ್ಲಿ ಹಾಲಿ ರನ್ನರ್ ಅಪ್ ಆಗಿರುವ ಕರ್ನಾಟಕ ತಂಡ ಅಕ್ಟೋಬರ್ 11 ರಂದು ಆಂಧ್ರ ವಿರುದ್ಧದ ಪಂದ್ಯದೊಂದಿಗೆ ಈ ಆವೃತ್ತಿಯ ರಣಜಿ ಸೀಸನ್ ಆರಂಭಿಸಲಿದೆ.

Auqib Nabi: ರಣಜಿ ಹೀರೋ ಆಕಿಬ್ ನಬಿ ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ

ವಿನಯ್ ಕುಮಾರ್ ವೃತ್ತಿಜೀವನ

ಇನ್ನು ವಿನಯ್ ಕುಮಾರ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಅದರಂತೆ ತಂಡದ ಪರ ಒಂದು ಟೆಸ್ಟ್‌ ಪಂದ್ಯವನ್ನಾಡಿರುವ ವಿನಯ್ ಒಂದು ವಿಕೆಟ್ ಪಡೆದಿದ್ದರೆ, 31 ಏಕದಿನ ಪಂದ್ಯಗಳಲ್ಲಿ 38 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂಬತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ವಿನಯ್, ಕರ್ನಾಟಕ ಪರ 139 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು ಅದರಲ್ಲಿ 504 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ರಣಜಿ ಟ್ರೋಫಿಯಲ್ಲಿ 442 ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ವೇಗದ ಬೌಲರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:29 pm, Thu, 13 August 26

Source link

Leave a Reply

Your email address will not be published. Required fields are marked *