ಕರ್ನಾಟಕ ಲೋಕಾಯುಕ್ತ Image Credit source: lokayukta.karnataka.gov.in
ಬೆಂಗಳೂರು, ಏಪ್ರಿಲ್ 18: ಕರ್ನಾಟಕ ಲೋಕಾಯುಕ್ತ (Karnataka Lokayukta) ಸಂಸ್ಥೆಯು ತನ್ನ ಅರ್ಥಪೂರ್ಣ ಹಾಗೂ ಅವಿರತ ಸೇವೆಯ 40 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಾಲ್ಕು ದಶಕಗಳ ಕಾರ್ಯಸೇವೆ ಮೆಲುಕು ಹಾಕುವ ಮೂಲಕ ವಿವಿಧ ಗೋಷ್ಠಿ ಹಾಗೂ ವಿಚಾರ ಸಂಕೀರ್ಣಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಿಷ್ಟು
ಕರ್ನಾಟಕ ಲೋಕಾಯುಕ್ತದ 4 ದಶಕಗಳ ಸಾರ್ಥಕ ಪಯಣ ಪೂರೈಸಿದೆ. ಹೀಗಾಗಿ ಶಕ್ತಿಸೌಧ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲೋಕಾಯುಕ್ತದ 40 ವರ್ಷದ ಸಾಧನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ. ಕರ್ನಾಟಕದ ಲೋಕಾಯುಕ್ತ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಾಯುಕ್ತ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ಏನು ಕ್ರಮ ಆಗಲಿದೆ ನಾಗರಿಕರು ಗಮನಿಸಿರುತ್ತಾರೆ. ಸಮಾಜದ ಅಂಕುಕೊಂಡುಗಳನ್ನ ತಿದ್ದುವ ಕೆಲಸ ಮಾಡ್ತಿದೆ. ರಿಮೋಟ್ ಏರಿಯಾಗಳಲ್ಲೂ ಲೋಕಾಯುಕ್ತ ಸೇವೆ ಅಗ್ರಗಣ್ಯ. ಉತ್ತಮ ಸ್ವತಂತ್ರ ಸಂಸ್ಥೆಯಾಗಿ ಕರ್ನಾಟಕದ ಲೋಕಾಯುಕ್ತ ಕೆಲಸ ನಿರ್ವಹಿಸುತ್ತಿದೆ ಅಂತ ಪ್ರಶಂಸೆ ವ್ಯಕ್ತಪಡಿಸಿದರು.
ಕರ್ನಾಟಕದ ಲೋಕಾಯುಕ್ತ ಒಳ್ಳೆಯ ಕೆಲಸ ಮಾಡುತ್ತಿದೆ: ಮುಖ್ಯ ನ್ಯಾ.ಅರವಿಂದ್ ಕುಮಾರ್
ಮುಖ್ಯ ನ್ಯಾ.ಅರವಿಂದ್ ಕುಮಾರ್ ಮಾತನಾಡಿ, 40 ವರ್ಷಗಳ ಸಾಧನೆ ಸಾಮಾನ್ಯವಾದದ್ದಲ್ಲ. 1984ರಲ್ಲಿ ಕರ್ನಾಟಕದಲ್ಲಿ ಲೋಕಾಯುಕ್ತ ಪ್ರಾರಂಭ ಆಯ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಪ್ರಾರಂಭ ಆದ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಕಾವಲು ನಾಯಿಯಂತೆ ಕೆಲಸ ಮಾಡುವುದು ಸುಲಭವಲ್ಲ. ಸಂತೋಷ್ ಹೆಗಡೆ ಸೇರಿ ಹಲವರು ಪಾರದರ್ಶಕತೆಯಿಂದ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರವನ್ನ ಬಯಲಿಗೆ ಎಳೆದು ಪಾರದರ್ಶಕತೆ ಎತ್ತಿ ಹಿಡಿದಿದ್ದಾರೆ. ರಾಜಕೀಯ ಒತ್ತಡ ಬಾರದೇ ಲೋಕಾಯುಕ್ತ ತನ್ನನ್ನ ರಕ್ಷಿಸಿಕೊಂಡಿದೆ ಎಂದರು.
ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್ ಹೇಳಿದ್ದಿಷ್ಟು
ಇನ್ನು ಕಾರ್ಯಕ್ರಮವನ್ನ ಉದ್ದೇಶಿಸಿ ಭಾಷಣ ಮಾಡಿದ ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್, ನಂಬಿಕೆ ಮತ್ತು ವಿಶ್ವಾಸಾರ್ಹ ಸಂಸ್ಥೆ ಲೋಕಾಯುಕ್ತ ಸಂಸ್ಥೆ. ಲೋಕಾಯುಕ್ತ, ಉಪ ಲೋಕಾಯುಕ್ತ ದೂರುಗಳ ಬಂದ ಕೂಡಲೇ ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಅನೇಕ ಕಾರ್ಯಾಗಾರ ಹಮ್ಮಿಕೊಂಡಿದೆ. ಸುಮಾರು 9,800 ಎಕರೆ ಜಮೀನು ಒತ್ತುವರಿ, ಕೆರೆ ಒತ್ತುವರಿ ತೆರವು ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ. ಬೆಂಗಳೂರಿನ 83 ಹಾಸ್ಟೆಲ್ಗೆ ದಿಢೀರ್ ಭೇಟಿ ಕೊಟ್ಟಿದ್ದೇವೆ. ತಾಲ್ಲೂಕು, ಪಂಚಾಯತ್ ಹಂತದ ಕೇಸ್ಗಳನ್ನ ಗಮನಿಸಿ ಕೂಡಲೇ ಕ್ರಮ ಜರುಗಿಸಲಾಗಿದೆ. ರಾಜ್ಯಾದ್ಯಂತ ಉತ್ತಮ ಕೆಲಸ ಮಾಡಲಾಗಿದೆ ಅಂತ ನಾಲ್ಕು ದಶಕಗಳ ಸೇವೆಯನ್ನ ಮೆಲುಕು ಹಾಕಿದರು.
ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್, ಲೋಕಾಯುಕ್ತ ನಿಯತಕಾಲಿಕೆಯನ್ನು ಬಿಡುಗಡೆ ಮಾಡಿ, ಬಳಿಕ ಚುನಾಯಿತ ಪ್ರತಿನಿಧಿಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ಹೊಸ ಪೋರ್ಟಲ್ ಹಾಗೂ ಆನ್‍ಲೈನ್ ತನಿಖಾ ಮಾಡ್ಯೂಲ್‍ಗೆ ಚಾಲನೆ ನೀಡಿದರು. ಬಳಿಕ ಮಾಜಿ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರನ್ನು ಮುಖ್ಯ ನ್ಯಾ. ಸೂರ್ಯ ಕಾಂತ್ ಸನ್ಮಾನಿಸಿದರು.
ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧ ಹೋರಾಟದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾತನಾಡಿದ್ರು. ಲೋಕಾಯುಕ್ತ ಕಾಯ್ದೆಯಡಿ ಕುಂದುಕೊರತೆಗಳ ಪರಿಹಾರ ವಿಷಯದ ಮೇಲೆ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮಾಹಿತಿ ಹಂಚಿಕೊಂಡ್ರೆ, ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ? ಎಂಬುದರ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ವಿಚಾರಗೋಷ್ಠಿ ನಡೆಸಿದರು.
ಒಟ್ಟಾರೆ ಪ್ರಾಮಾಣಿಕ ವ್ಯಕ್ತಿಗಳನ್ನು ಬೆಳೆಸುವಲ್ಲಿ ನಾವು ವಿಫಲವಾದರೆ ಅನ್ಯಾಯವು ಗೆದ್ದು, ನ್ಯಾಯವು ಮರೆಯಾಗುವ ಅಪಾಯವಿದೆ ಎಂದು ಸಂಸ್ಥೆ ಎಚ್ಚರಿಸಿದೆ. ಸವಾಲುಗಳೇ ವ್ಯಕ್ತಿಯನ್ನು ಪರಿಪೂರ್ಣಗೊಳಿಸುತ್ತವೆ ಎಂಬ ಧ್ಯೇಯವಾಕ್ಯದೊಂದಿಗೆ ಲೋಕಾಯುಕ್ತವು ನಾಲ್ಕು ದಶಕಗಳನ್ನು ದಾಟಿ ಮುಂದಿನ ಹೆಜ್ಜೆಯನ್ನು ಇಡುತ್ತಿದೆ.
ಇದನ್ನೂ ಓದಿ: 1.2 ಲಕ್ಷ ಹಣ ಪಡೆಯುವಾಗ ಪಿಡಿಓ, ಯುಟ್ಯೂಬರ್ ಲೋಕಾಯುಕ್ತ ಬಲೆಗೆ
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಕರ್ನಾಟಕದ ಲೋಕಾಯುಕ್ತ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹಾಗೂ ಕರ್ನಾಟಕದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:06 pm, Sat, 18 April 26