ಕಲಬುರಗಿ, ಏಪ್ರಿಲ್ 30: ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯದ ನಾಯಕತ್ವ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ಹರಿದಾಡುತ್ತಿರುವ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿನ ಗೊಂದಲಗಳನ್ನು ಆದಷ್ಟು ಬೇಗನೆ ಬಗೆಹರಿಸುವುದಾಗಿ ಅವರು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚೆಗೆ ಕಾಂಗ್ರೆಸ್ನ 40-50 ಶಾಸಕರು ದೆಹಲಿಗೆ ಟಿಕೆಟ್ ಕಾಯ್ದಿರಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಖರ್ಗೆ ಅವರೇ ಸಿಎಂ ಆದರೆ ಉತ್ತಮ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೂ ಉತ್ತರಿಸಿದ ಅವರು, ನಾನಾದರೆ ಉತ್ತಮ ಅಂತ ನೀವು ಹೇಳ್ತೀರಿ, ಅವರು ಹೇಳ್ತಾರೆ, ಮೇಲಿನವರು ಹೇಳ್ತಾರೆ. ಈಗಾಗಲೇ ಇಲ್ಲಿ ಚೀಫ್ ಮಿನಿಸ್ಟರ್ ಇದ್ದಾರೆ. ಬದಲಾವಣೆ ಆಗಬೇಕೆಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ನಾವು ಸೇರಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ, ನೋಡೋಣ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.