ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ? – Kannada News | Modi Cabinet’s Mega Push: Rs 37,500 Cr Coal Gasification to Cut Imports, Create 50K Jobs

ಕಲ್ಲಿದ್ದಲು ಅನಿಲೀಕರಣ ಪ್ರಕ್ರಿಯೆ ವಿವರಿಸಿದ ಸಚಿವ ಎ ವೈಷ್ಣವ್Image Credit source: PTI

ನವದೆಹಲಿ, ಮೇ 13: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ (Union Cabinet) ಸಭೆಯು ‘ಮೇಲ್ಮೈ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣ’ (Surface Coal/Lignite Gasification) ಯೋಜನೆಗಳನ್ನು ಉತ್ತೇಜಿಸಲು 37,500 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ನೆರವನ್ನು ಘೋಷಿಸಿದೆ. ಈ ಯೋಜನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಈ ಯೋಜನೆ ಸಹಕಾರಿಯಾಗಲಿದೆ. ಪ್ರಸ್ತುತ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಎಲ್‌ಎನ್‌ಜಿ (LNG), ಯೂರಿಯಾ, ಅಮೋನಿಯಾ ಮತ್ತು ಮೆಥನಾಲ್ ಅಂತಹ ಉತ್ಪನ್ನಗಳನ್ನು ದೇಶೀಯವಾಗಿಯೇ ತಯಾರಿಸಲು ಈ ಯೋಜನೆ ನೆರವಾಗಲಿದೆ.

ಈ ಬೃಹತ್ ಯೋಜನೆಯಿಂದ ಸುಮಾರು 25ಕ್ಕೂ ಹೆಚ್ಚು ಕಲ್ಲಿದ್ದಲು ಉತ್ಪಾದನಾ ಪ್ರದೇಶಗಳಲ್ಲಿ ಸುಮಾರು 50,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಯೋಜನೆಯ ಮೂಲಕ ಸುಮಾರು 2.5 ರಿಂದ 3.0 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ಇಂಧನ ಕಡಿಮೆ ಬಳಸಿ ಎನ್ನುತ್ತಿರೋದು ಮೋದಿ ಮಾತ್ರವಲ್ಲ, ವಿವಿಧ ದೇಶಗಳು ಜಾರಿಗೊಳಿಸಿರುವ ಸಂಗತಿಗಳೇ

ಕಲ್ಲಿದ್ದಲು ಅನಿಲೀಕರಣ ಯೋಜನೆಯ ಪ್ರಮುಖ ಅಂಶಗಳು

  1. ಆರ್ಥಿಕ ಪ್ರೋತ್ಸಾಹ: ಹೊಸ ಯೋಜನೆಗಳಿಗೆ ಯಂತ್ರೋಪಕರಣ ಮತ್ತು ಸ್ಥಾವರ ವೆಚ್ಚದ ಗರಿಷ್ಠ 20% ರಷ್ಟು ಆರ್ಥಿಕ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
  2. ಪಾರದರ್ಶಕ ಆಯ್ಕೆ: ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಯೋಜನೆಗಳನ್ನು ಆಯ್ಕೆ ಮಾಡಲಾಗುತ್ತದೆ.
  3. ದೀರ್ಘಾವಧಿ ಭರವಸೆ: ಹೂಡಿಕೆದಾರರಿಗೆ ದೀರ್ಘಾವಧಿಯ ನೀತಿ ನಿಶ್ಚಿತತೆಯನ್ನು ಒದಗಿಸಲು ಕಲ್ಲಿದ್ದಲು ಸಂಪರ್ಕದ ಅವಧಿಯನ್ನು 30 ವರ್ಷಗಳವರೆಗೆ ವಿಸ್ತರಿಸಲಾಗಿದೆ.
  4. ಅನಿಲೀಕರಣದ ಗುರಿ: ಮೇಲ್ಮೈ ಕಲ್ಲಿದ್ದಲು ಮತ್ತು ಲಿಗ್ನೈಟ್ ಅನಿಲೀಕರಣ ಯೋಜನೆಗಳಿಗೆ ಪ್ರೋತ್ಸಾಹಿಸಲು 37,500 ಕೋಟಿ ರೂ ಇಡಲಅಗಿದೆ. 75 ಮಿಲಿಯನ್ ಟನ್​ಗಳಷ್ಟು ಕಲ್ಲಿದ್ದಲು ಮತ್ತು ಲಿಗ್ನೈಟ್​ನ ಅನಿಲೀಕರಣಗೊಳಿಸುವ ಗುರಿ ಇಡಲಾಗಿದೆ.

ಭಾರತವು ವಿಶ್ವದ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಈ ಕಲ್ಲಿದ್ದಲನ್ನು ನೇರವಾಗಿ ಸುಡುವ ಬದಲು ‘ಸಿಂಗ್ಯಾಸ್’ (Syngas) ಆಗಿ ಪರಿವರ್ತಿಸುವ ಮೂಲಕ ರಾಸಾಯನಿಕಗಳು ಮತ್ತು ಇಂಧನಗಳನ್ನು ತಯಾರಿಸುವುದು ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿದೆ. ಇದು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಕನಸಿಗೆ ಬಲ ತುಂಬಲಿದೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು

ಅಶ್ವಿನಿ ವೈಷ್ಣವ್ ಅವರಿಂದ ವಿವರಣೆ

ಕ್ಯಾಬಿನೆಟ್ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕಲ್ಲಿದ್ದಲು ಅನಿಲೀಕರಣ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು. ಅನಿಲದ ಬೇಡಿಕೆ ಪೂರೈಸಲು ಈ ಯೋಜನೆ ಎಷ್ಟು ಮಹತ್ವ ಎಂಬುದನ್ನು ಅವರು ವಿವರಿಸಿದರು.

‘ಭಾರತದಲ್ಲಿ 200 ವರ್ಷಗಳಿಗೆ ಆಗುವಷ್ಟು ಕಲ್ಲಿದ್ದಲು ಸಂಗ್ರಹ ಇದೆ. ಕಲ್ಲಿದ್ದಲಿನಿಂದ ಗ್ಯಾಸ್ ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಯಲ್ಲಿ, ಕಲ್ಲಿದ್ದಲನ್ನು ಜಜ್ಜಲಾಗುತ್ತದೆ. ಕುಲುಮೆಯೊಳಗೆ (Furnace) ಬಹಳ ಅಧಿಕ ಉಷ್ಣಾಂಶ ಹಾಗು ಒತ್ತಡದಲ್ಲಿ ಅದನ್ನು ಬಿಸಿ ಮಾಡಲಾಗುತ್ತದೆ. ಆಗ ಆ ಕಲ್ಲಿದ್ದಲು ಹೊತ್ತಿಉರಿಯುವ ಬದಲು ಸಿಂಥೆಟಿಕ್ ಗ್ಯಾಸ್ ಅಥವಾ ಸಿನ್​ಗ್ಯಾಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಸಿನ್​ಗ್ಯಾಸ್​ನಲ್ಲಿ ಮುಖ್ಯವಾಗಿ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಜನ್ ಇರುತ್ತದೆ. ಇದನ್ನು ನೈಸರ್ಗಿಕ ಅನಿಲದಂತೆ ಉಪಯೋಗಿಸಬಹುದು. ವಿದ್ಯುತ್ ಉತ್ಪಾದನೆಗೆ ಬಳಸಬಹುದು, ಎಲ್​ಪಿಜಿ ರೀತಿಯ ಇಂಧನವಾಗಿಯೂ ಬಳಸಬಹುದು’ ಎಂದು ವೈಷ್ಣವ್ ವಿವರ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *