FIFA World Cup 2026: ಫಿಫಾ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿರುವ ಪೋರ್ಚುಗಲ್, ದುರ್ಬಲ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ವಿರುದ್ಧ 1-1 ಗೋಲುಗಳ ಆಘಾತಕಾರಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಜಗತ್ತಿನ ಶ್ರೇಷ್ಠ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದಾಖಲೆಯ 6ನೇ ವಿಶ್ವಕಪ್ ಅಭಿಯಾನಕ್ಕೆ ಕಾಂಗೋ ಪಡೆ ಆರಂಭದಲ್ಲೇ ತಣ್ಣೀರೆರಚಿದ್ದಾರೆ. ಅಷ್ಟೇ ಈ ಪಂದ್ಯದಲ್ಲಿ ರೊನಾಲ್ಡೊ ಅನುಭವಿಸಿದ ಹತಾಶೆ ಮತ್ತು ಮಂಕಾದ ಪ್ರದರ್ಶನ ಈಗ ಜಾಗತಿಕ ಫುಟ್‌ಬಾಲ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾಂಗೋ ಹೊಸ ಇತಿಹಾಸ:
ಪಂದ್ಯ ಆರಂಭವಾದ ಕೇವಲ 6ನೇ ನಿಮಿಷದಲ್ಲೇ ಝುವಾವೊ ನೆವೆಸ್ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಪೋರ್ಚುಗಲ್ 1-0 ಮುನ್ನಡೆ ಸಾಧಿಸಿ ಸುಲಭ ಜಯದ ಮುನ್ಸೂಚನೆ ನೀಡಿತ್ತು. ಆದರೆ, ದ್ವಿತೀಯಾರ್ಧಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ (45+5ನೇ ನಿಮಿಷ) ಕಾಂಗೋದ ಯೋವಾನೆ ವಿಸ್ಸಾ ಹೆಡರ್ ಮೂಲಕ ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಇದು ವಿಶ್ವಕಪ್ ಇತಿಹಾಸದಲ್ಲೇ ಕಾಂಗೋ ತಂಡ ದಾಖಲಿಸಿದ ಮೊದಲ ಗೋಲು ಮತ್ತು ಮೊದಲ ಪಾಯಿಂಟ್ ಆಗಿ ಇತಿಹಾಸ ಪುಟ ಸೇರಿತು.
ಕಂಗೆಟ್ಟ ಕ್ರಿಸ್ಟಿಯಾನೊ:
ಕಾಂಗೋ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರದರ್ಶನವನ್ನು ಅಂಕಿ-ಅಂಶಗಳ ಆಧಾರದ ಮೇಲೆ ವಿಶ್ಲೇಷಿಸಿದರೆ, ಅವರು ಮೈದಾನದಲ್ಲಿ ಎಷ್ಟು ಮಂಕಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಪೂರ್ಣ 90 ನಿಮಿಷಗಳ ಕಾಲ ಮೈದಾನದಲ್ಲಿದ್ದ ರೊನಾಲ್ಡೊ ಅವರ ಅಧಿಕೃತ ಪಂದ್ಯದ ಅಂಕಿ-ಅಂಶಗಳು ಇಲ್ಲಿವೆ…
- ಒಟ್ಟು ಟಚ್: ಇಡೀ ಪಂದ್ಯದಲ್ಲಿ ರೊನಾಲ್ಡೊ ಕೇವಲ 25 ಬಾರಿ ಮಾತ್ರ ಚೆಂಡನ್ನು ಟಚ್ ಮಾಡಿದ್ದಾರೆ. ಇದು ಅವರ ವಿಶ್ವಕಪ್ ವೃತ್ತಿಜೀವನದಲ್ಲೇ ಆರಂಭಿಕ ಆಟಗಾರನಾಗಿ ಅತ್ಯಂತ ಕಡಿಮೆ ಎಂಬುದು ವಿಶೇಷ.
- 5 ಟಚ್ಗಳು: ಕಾಂಗೋ ತಂಡದ ಪೆನಾಲ್ಟಿ ಬಾಕ್ಸ್‌ನೊಳಗೆ ರೊನಾಲ್ಡೊಗೆ ಸಿಕ್ಕಿದ್ದು ಕೇವಲ 5 ಟಚ್ಗಳು ಮಾತ್ರ.
- ಒಟ್ಟು ಪಾಸ್‌ಗಳು: ರೊನಾಲ್ಡೊ ಒಟ್ಟು 21 ಪಾಸ್‌ಗಳನ್ನು ನೀಡಲು ಪ್ರಯತ್ನಿಸಿದರು. ಅದರಲ್ಲಿ 19 ಪಾಸ್‌ಗಳು ನಿಖರವಾಗಿ ಸಹ ಆಟಗಾರರನ್ನು ತಲುಪಿದ್ದವು.
- ಅಸಿಸ್ಟ್: ಸಹ ಆಟಗಾರರಿಗೆ ಗೋಲು ಗಳಿಸಲು ನೆರವಾಗುವ ಯಾವುದೇ ಅಸಿಸ್ಟ್ ನೀಡಲು ಅವರಿಗೆ ಸಾಧ್ಯವಾಗಲಿಲ್ಲ
- ಫೈನಲ್ ಥರ್ಡ್ ಪಾಸ್: ಪಂದ್ಯದುದ್ದಕ್ಕೂ ಅವರು ಎದುರಾಳಿ ಕೋಟೆಯೊಳಗೆ ನೀಡಿದ್ದು ಕೇವಲ 1 ಪಾಸ್ ಮಾತ್ರ
- ಗೋಲು ಶಾಟ್‌ಗಳು: ರೊನಾಲ್ಡೊ ಕಾಂಗೋ ಗೋಲು ಪೆಟ್ಟಿಗೆಯತ್ತ ಒಟ್ಟು 2 ರಿಂದ 3 ಬಾರಿ ಶಾಟ್ ಬಾರಿಸಲು ಪ್ರಯತ್ನಿಸಿದ್ದಾರೆ.
- ಶಾಟ್ಸ್ ಆನ್ ಟಾರ್ಗೆಟ್: ಅತ್ಯಂತ ನಿರಾಶಾದಾಯಕ ಸಂಗತಿಯೆಂದರೆ, ಅವರ ಯಾವುದೇ ಶಾಟ್‌ಗಳು ಕಾಂಗೋ ಗೋಲ್‌ಕೀಪರ್‌ನತ್ತ ನೇರ ಗುರಿಯನ್ನು ಹೊಂದಿರಲಿಲ್ಲ.
ರೊನಾಲ್ಡೊ ವೈಫಲ್ಯಕ್ಕೆ ಕಾರಣವೇನು?
- ಮಿಡ್‌ಫೀಲ್ಡ್ ಸಂಪರ್ಕದ ವೈಫಲ್ಯ: ಪೋರ್ಚುಗಲ್‌ನ ಮಧ್ಯಮ ಕ್ರಮಾಂಕದ ಆಟಗಾರರು ರೊನಾಲ್ಡೊ ಅವರಿಗೆ ನಿಖರವಾದ ಪಾಸ್‌ಗಳನ್ನು ತಲುಪಿಸುವಲ್ಲಿ ಸಂಪೂರ್ಣ ವಿಫಲರಾದರು. ಹೀಗಾಗಿ ಕಾಂಗೋದ ಆಕ್ರಮಣಕಾರಿ ರಕ್ಷಣಾ ತಂತ್ರದಿಂದಾಗಿ ರೊನಾಲ್ಡೊ ಮೈದಾನದಲ್ಲಿ ಒಂಟಿಯಾದರು.
- ‘ಮ್ಯಾನ್-ಮಾರ್ಕಿಂಗ್’ ತಂತ್ರ: ಕಾಂಗೋ ತಂಡವು ರೊನಾಲ್ಡೊ ಅವರನ್ನು ಕಟ್ಟಿಹಾಕಲು ವಿಶೇಷ ರಕ್ಷಣಾ ತಂತ್ರ ರೂಪಿಸಿತ್ತು. ಅವರು ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲೇ ಇಬ್ಬರು ಅಥವಾ ಮೂವರು ಡಿಫೆಂಡರ್‌ಗಳು ಅವರನ್ನು ಸುತ್ತುವರಿಯುವ ಮೂಲಕ ಮುಕ್ತವಾಗಿ ಚಲಿಸಲು ಅವಕಾಶ ನೀಡಲಿಲ್ಲ.
- ಕ್ಷೀಣಿಸಿದ ದೈಹಿಕ ವೇಗ: 41ರ ಹರೆಯದಲ್ಲೂ ರೊನಾಲ್ಡೊ ಅದ್ಭುತ ಫಿಟ್ನೆಸ್ ಹೊಂದಿದ್ದರೂ, ಅವರ ಕೌಂಟರ್-ಅಟ್ಯಾಕಿಂಗ್ ವೇಗ ಮತ್ತು ಚುರುಕುತನ ಮೊದಲಿನಷ್ಟಿರಲಿಲ್ಲ. ಕಾಂಗೋದ ಯುವ ಮತ್ತು ದೈಹಿಕವಾಗಿ ಬಲಿಷ್ಠ ಆಟಗಾರರ ವೇಗಕ್ಕೆ ಸರಿಸಾಟಿಯಾಗಲು ಅವರು ಪರದಾಡಿದರು.
- ಕಳಪೆ ‘ಫಿನಿಶಿಂಗ್’: ಪಂದ್ಯದ ದ್ವಿತೀಯಾರ್ಧದಲ್ಲಿ ರೊನಾಲ್ಡೊ ಅವರಿಗೆ ಎರಡು ಸ್ಪಷ್ಟ ಗೋಲಿನ ಅವಕಾಶಗಳು ಸಿಕ್ಕಿದ್ದವು. ಆದರೆ, ತಮ್ಮ ಎಂದಿನ ಕ್ಲಿನಿಕಲ್ ಶೈಲಿಯಲ್ಲಿ ಚೆಂಡನ್ನು ಗೋಲ್ ಬಾಕ್ಸ್‌ನೊಳಗೆ ನುಗ್ಗಿಸುವಲ್ಲಿ ವಿಫಲರಾಗಿದ್ದು ಅವರ ಹತಾಶೆಯನ್ನು ಹೆಚ್ಚಿಸಿತು.
ಇದನ್ನೂ ಓದಿ: ಟೀಮ್ ಇಂಡಿಯಾ ದಾಂಡಿಗರ ಆರ್ಭಟ… 11 ದಾಖಲೆಗಳು ನಿರ್ಮಾಣ
ಒಟ್ಟಾರೆಯಾಗಿ ಹೇಳುವುದಾದರೆ, ಫುಟ್‌ಬಾಲ್ ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಈ ಆರಂಭಿಕ ಹಿನ್ನಡೆ ಹೊಸದೇನಲ್ಲ. ಕಾಂಗೋ ವಿರುದ್ಧದ ಪಂದ್ಯವು ಪೋರ್ಚುಗಲ್ ತಂಡದ ತಂತ್ರಗಾರಿಕೆಗೆ ಒಡ್ಡಿದ ಸವಾಲಾಗಿದ್ದರೆ, ರೊನಾಲ್ಡೊ ಪಾಲಿಗೆ ತಮ್ಮ ವೃತ್ತಿಜೀವನದ ಮತ್ತೊಂದು ಕಠಿಣ ಪರೀಕ್ಷೆಯಾಗಿದೆ.
ಟೀಕೆಗಳು ಮತ್ತು ಒತ್ತಡಗಳ ನಡುವೆಯೇ ಪುಟಿದೆೇಳುವುದು ರೊನಾಲ್ಡೊ ಅವರ ಜನ್ಮಜಾತ ಗುಣ. ಈ ಆಘಾತಕಾರಿ ಡ್ರಾದಿಂದ ಪಾಠ ಕಲಿಯಲಿರುವ ಪೋರ್ಚುಗಲ್ ಪಡೆ, ಉಜ್ಬೇಕಿಸ್ತಾನ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ. ಅಂತಹದೊಂದು ರಣತಂತ್ರದೊಂದಿಗೆ ರೊನಾಲ್ಡೊ ಮತ್ತೆ ವಿಶ್ವರೂಪ ಪ್ರದರ್ಶಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
