ಕಾಂಗ್ರೆಸ್​ನಲ್ಲಿ ಗರಿಗೆದರಿದ ಡಿನ್ನರ್ ಪಾಲಿಟಿಕ್ಸ್: ಮಾರ್ಚ್ 16 ರಂದು ಸಚಿವರಿಗೆ ಔತಣಕೂಟ ಆಯೋಜಿಸಿದ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್​ನಲ್ಲಿ ಗರಿಗೆದರಿದ ಡಿನ್ನರ್ ಪಾಲಿಟಿಕ್ಸ್: ಮಾರ್ಚ್ 16 ರಂದು ಸಚಿವರಿಗೆ ಔತಣಕೂಟ ಆಯೋಜಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್ 13: ಕರ್ನಾಟಕ ಕಾಂಗ್ರೆಸ್​ನಲ್ಲಿ (Congress) ಮತ್ತೆ ‘ಡಿನ್ನರ್ ರಾಜಕೀಯ’ ಸದ್ದು ಮಾಡುತ್ತಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವೇ ದಿನಗಳ ಹಿಂದೆ ಡಿನ್ನರ್ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೂಡ ಸಚಿವರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಆಂತರಿಕ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿರುವುದು ಗಮನಾರ್ಹವಾಗಿದೆ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಂಡ ನೆಪದಲ್ಲಿ ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ಆಯೋಜಿಸಿದ್ದರು. ಅದರ ಬೆನ್ನಲ್ಲೇ ಮಾರ್ಚ್ 12ರಂದು ಸಿಎಂ ಮತ್ತು ಡಿಸಿಎಂ ಬಣಗಳಿಗೆ ಸೇರಿರುವ ಕೆಲವು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿತ್ತು.

ಈ ಸಭೆಯಲ್ಲಿ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಸಂಪುಟ ಪುನರ್‌ರಚನೆಗಾಗಿ ಒತ್ತಡ ಹೇರುವ ತಂತ್ರಗಾರಿಕೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬೆಳವಣಿಗೆಗಳ ನಡುವೆಯೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಡಿನ್ನರ್ ಕೂಟ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ವಿವಿಧ ರೀತಿಯ ಚರ್ಚೆಗೆ ಗ್ರಾಸವಾಗಿದೆ.

ಈ ಡಿನ್ನರ್ ಸಭೆಯಲ್ಲಿ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ, ಒಳಮೀಸಲಾತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ಘೋಷಣೆಯಾಗಬಹುದಾದ ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಗಳಲ್ಲಿ ಯಾರು ಭಾಗವಹಿಸಬೇಕು ಎಂಬುದರ ಕುರಿತಾಗಿಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ರೆಸಾರ್ಟ್ ರಾಜಕೀಯ ಶುರು: ಬಿಡದಿಯ ವಂಡರ್ ಲಾ ರೆಸಾರ್ಟ್​ನತ್ತ 14 ಕಾಂಗ್ರೆಸ್ ಶಾಸಕರು!

ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರ ಡಿನ್ನರ್ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಜಿಸಿರುವ ಈ ಔತಣಕೂಟ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಆಂತರಿಕ ರಾಜಕೀಯದ ಮೇಲೆ ಅದರ ಪರಿಣಾಮ ಹೇಗಿರಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *