ಕೇಂದ್ರ ಸಚಿವ ಪ್ರಲ್ಹಾದ ಜೋಶಿImage Credit source: Google
ನವದೆಹಲಿ, ಫೆಬ್ರವರಿ 18: ನಾಗರಿಕರಿಗೆ ಮೂಲಸೌಕರ್ಯ ಒದಗಿಸಬೇಕಾದ 24ಕ್ಕೂ ಹೆಚ್ಚು ನಿವೇಶನಗಳನ್ನು ಕಾಂಗ್ರೆಸ್ ಕಚೇರಿಗಳಿಗೆ ಬಳಸಲು ಅದೇನು ಕಾಂಗ್ರೆಸ್ ಪಿತ್ರಾರ್ಜಿತ ಆಸ್ತಿಯೇ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕೆಂಡ ಕಾರಿದ್ದಾರೆ. ರಾಜ್ಯದಲ್ಲಿ ನಾಗರಿಕ ಸೌಲಭ್ಯದ(CA) ನಿವೇಶನಗಳನ್ನು ಕಡಿಮೆ ಬೆಲೆಗೆ, ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕೆ ಹಂಚಿಕೆ ಮಾಡಿರುವುದು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪರಮಾವಧಿ ಎಂದು ಅವರು ಆರೋಪಿಸಿದ್ದಾರೆ.
‘ಸಾರ್ವಜನಿಕ ಆಸ್ತಿ ಕಬಳಿಕೆ’
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಕ್ಸ್ ಪೋಸ್ಟ್
ಸಾರ್ವಜನಿಕ ಉದ್ಯಾನವನ, ಗ್ರಂಥಾಲಯ, ಆಸ್ಪತ್ರೆಗಳಿಗೆ ಬಳಕೆ ಆಗಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ‘ಕಾಂಗ್ರೆಸ್ ಭವನ’ಗಳಿಗೆ ಮೀಸಲಿಟ್ಟಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ . ಒಂದೆಡೆ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ ಎನ್ನುವ ಈ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ತನ್ನ ಪಕ್ಷದ ಕಚೇರಿಗಳಿಗೆ ಬಳಸಿಕೊಳ್ಳುತ್ತಿದೆ. ಈ ಮೂಲಕ ಸಾರ್ವಜನಿಕ ಆಸ್ತಿಯನ್ನು ಕಬಳಿಸುತ್ತಿದೆ. ರಾಜ್ಯದ ಸಾರ್ವಜನಿಕ ಆಸ್ತಿಯನ್ನು ಕಾಂಗ್ರೆಸ್ ಪಕ್ಷ ತನ್ನ ಪಿತ್ರಾರ್ಜಿತ ಆಸ್ತಿ ಎಂಬಂತೆ ಬಳಸಿಕೊಳ್ಳುತ್ತಿದ್ದು, ಬಡವರ ಹಿತ ಕಾಯುವ ಬದಲು ಕಾಂಗ್ರೆಸ್ ತನ್ನ ‘ಪಕ್ಷದ ಹಿತ’ಕ್ಕೆ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್ಗಳ ಬಳಕೆ; ದೆಹಲಿಯಲ್ಲೂ ಸದ್ದು ಮಾಡಿದ ವಿವಾದ
ಹೋರಾಟದ ಎಚ್ಚರಿಕೆ
ಲೂಟಿ ಹೊಡೆಯುವುದೇ ಕಾಂಗ್ರೆಸ್‌ನ ಮೂಲ ಸಿದ್ಧಾಂತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದಿರುವ ಜೋಶಿ, ಪಕ್ಷದ ಕಚೇರಿಗಳಿಗೆ ಮಾಡಿರುವ ಈ ಅಕ್ರಮ ಹಂಚಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಬಿಜೆಪಿ ಬೃಹತ್ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಅವರು ಇದೇ ವೇಳೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
