
ಹಾಸನ, ಏಪ್ರಿಲ್ 9: ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಕಾಡಾನೆಗಳ ಸಮಸ್ಯೆಗೆ ಕೊನೆಗೂ ತಾಂತ್ರಿಕ ಪರಿಹಾರವೊಂದು ದಕ್ಕಿದೆ. ಕೊಡಗಿನಿಂದ ಹಾಸನಕ್ಕೆ (Hassan) ಲಗ್ಗೆಯಿಡುತ್ತಿದ್ದ ಆನೆ ಹಿಂಡುಗಳನ್ನು ತಡೆಯಲು ನಿರ್ಮಿಸಲಾಗುತ್ತಿದ್ದ ರೈಲ್ವೆ ಹಳಿ ಬ್ಯಾರಿಕೇಡ್ (Railway Track Barricade) ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಹಾಸನ ಜಿಲ್ಲೆಯ ಆಲೂರು, ಬೇಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಕಳೆದ 20 ವರ್ಷಗಳಲ್ಲಿ ಕಾಡಾನೆ ದಾಳಿಗೆ ಸುಮಾರು 80ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಕೊಡಗಿನಿಂದ ವಲಸೆ ಬರುವ ಆನೆಗಳು ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲೇ ಬೀಡುಬಿಡುವುದು ಈ ಸಮಸ್ಯೆಗೆ ಮುಖ್ಯ ಕಾರಣವಾಗಿತ್ತು. ಇದನ್ನು ತಡೆಯಲು ಸರ್ಕಾರವು ಹಾಸನ ಮತ್ತು ಕೊಡಗು ಗಡಿಭಾಗದಲ್ಲಿ ಸುಮಾರು 35 ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು.
ಮಾಸ್ಟರ್ ಪ್ಲಾನ್ ಸಿದ್ಧ
ಆಲೂರು ಮತ್ತು ಸಕಲೇಶಪುರ ತಾಲ್ಲೂಕಿನ ಗಡಿಭಾಗದಲ್ಲಿ ಈ ಬ್ಯಾರಿಕೇಡ್ ನಿರ್ಮಾಣವಾಗಿದ್ದು, ಇದರಲ್ಲಿ ಆನೆಗಳ ಸಂಚಾರ ನಿಯಂತ್ರಿಸಲು 13 ಪ್ರಮುಖ ಗೇಟ್ಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶಗಳಾದ ಕಟ್ಟೆಪುರ, ಶಿರಗಾವರ ಮೂಲಕ ನೀರಿಗಾಗಿ ಬರುವ ಆನೆಗಳಿಗೆ ಇನ್ಮುಂದೆ ಈ ರೈಲ್ವೆ ಹಳಿಗಳ ತಡೆಗೋಡೆ ಅಡ್ಡಿಯಾಗಲಿದೆ.
ಕಾಫಿ ಬೆಳೆಗಾರರ ಆಗ್ರಹವೇನು?
ಬ್ಯಾರಿಕೇಡ್ ನಿರ್ಮಾಣವೇನೋ ಪೂರ್ಣಗೊಂಡಿದೆ, ಇದರಿಂದ ಕೊಡಗಿನಿಂದ ಹೊಸ ಆನೆಗಳು ಬರುವುದು ತಪ್ಪಬಹುದು. ಆದರೆ ಈಗಾಗಲೇ ಹಾಸನದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ 80ಕ್ಕೂ ಹೆಚ್ಚು ಆನೆಗಳ ಕಥೆಯೇನು? ಎಂಬುದು ಸ್ಥಳೀಯ ಬೆಳೆಗಾರರ ಪ್ರಶ್ನೆ. ನಾಡಿನಲ್ಲಿ ಬೀಡುಬಿಟ್ಟಿರುವ ಪುಂಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕು ಅಥವಾ ಶ್ರೀಲಂಕಾ ಮಾದರಿಯಲ್ಲಿ ಆನೆಧಾಮ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ.
ಇದನ್ನೂ ಓದಿ: ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ
ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಬೆನ್ನಲ್ಲೇ ಈಗ ಅರಣ್ಯ ಇಲಾಖೆಯು ನಾಡಿನಲ್ಲಿರುವ ಆನೆಗಳ ಸ್ಥಳಾಂತರ ಪ್ರಕ್ರಿಯೆಗೂ ತಯಾರಿ ನಡೆಸುತ್ತಿದ್ದು, ಮಲೆನಾಡಿಗರ ಆತಂಕ ದೂರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.