ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ರೈವಲ್ರಿ ಅತ್ಯಂತ ರೋಚಕವಾದದ್ದು. ಕೇವಲ ಮೈದಾನದಲ್ಲಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಈ ಎರಡು ತಂಡಗಳ ಅಭಿಮಾನಿಗಳು ಹಾಗೂ ಫ್ರಾಂಚೈಸಿಗಳ ನಡುವೆ ಸದಾ ಯುದ್ಧ ನಡೆಯುತ್ತಲೇ ಇರುತ್ತದೆ. ಅದು ಈ ಬಾರಿ ಕೂಡ ನಡೆದಿದೆ. ಐಪಿಎಲ್ನ 57ನೇ ಪಂದ್ಯಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಆರ್‌ಸಿಬಿಯನ್ನು ಕಾಲೆಳೆಯಲು ಹೈ-ಬಜೆಟ್ ‘ಫಾರೆಸ್ಟ್ ಕಿಂಗ್’ ಎಂಬ ಜಂಗಲ್ ಥೀಮ್ ಪ್ರೋಮೋ ಬಿಡುಗಡೆ ಮಾಡಿತ್ತು.
ಈ ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಳ್ಳುವ ಮೂಲಕ ಯಾರು ಏನೇ ಹೇಳಿದರೂ, ಕಾಡಿನ ನಿಜವಾದ ರಾಜ ಯಾರು ಎಂಬುದು ಕಾಡಿಗೆ ಗೊತ್ತು ಎಂದು ಕೆಕೆಆರ್ ಸ್ಪಷ್ಟ ಸಂದೇಶ ನೀಡಿದ್ದರು. ಇಲ್ಲಿ ಹುಲಿಯನ್ನು ರೂಪಕವಾಗಿ ಬಳಸಿಕೊಂಡಿದ್ದು ಬೆಂಗಾಲ್ ಟೈಗರ್ಸ್ (ಕೆಕೆಆರ್) ಎಂಬುದಾಗಿ. ಇನ್ನು ಕಾಡಿನ ನಿಜವಾದ ರಾಜ ಹುಲಿ ಎನ್ನಲು ಮುಖ್ಯ ಕಾರಣ ಆರ್‌ಸಿಬಿ ಸಿಂಬಲ್ ಸಿಂಹ ಆಗಿರುವುದು.
ಅಷ್ಟೇ ಅಲ್ಲದೆ ಈ ವಿಡಿಯೋದಲ್ಲಿ 49 ಸಂಖ್ಯೆಯನ್ನು ತೋರಿಸುವ ಮೂಲಕ ಆರ್‌ಸಿಬಿಯ ಹೀನಾಯ ದಾಖಲೆಯನ್ನು ಹೀಯಾಳಿಸಿದ್ದರು. ಇನ್ನು ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ಅವರ ಅಬ್ಬರಕ್ಕೆ ತಾನು ಹೆದರುವುದಿಲ್ಲ. ಕಾಡಿನ ರಾಜ ಯಾರೆಂಬುದು ಗೊತ್ತಿದೆ. ಈ ಬೇಟೆಯೊಂದಿಗೆ ಪ್ಲೇಆಫ್ಗೇರುತ್ತೇವೆ ಎಂದು ಪರೋಕ್ಷವಾಗಿ ಆರ್ಸಿಬಿಗೆ ಸವಾಲು ಹಾಕಿದ್ದರು.
The Knights’ hunt continues in Raipur ⏳🔥 pic.twitter.com/vZPl7t578Q
— KolkataKnightRiders (@KKRiders) May 13, 2026
ಆದರೆ ಈ “ಮಾತಿಗೆ ಮಾತಿಗಿಂತ, ಬ್ಯಾಟಿನ ಸೌಂಡೇ ಸೂಕ್ತ ಉತ್ತರ” ಎಂಬಂತೆ, ಆರ್‌ಸಿಬಿಯ ಅಸಲಿ ‘ಕಿಂಗ್’ ವಿರಾಟ್ ಕೊಹ್ಲಿ ಮೈದಾನದಲ್ಲಿ ಅಬ್ಬರಿಸಿ ಕೆಕೆಆರ್ ಅಹಂಕಾರವನ್ನು ಧೂಳೀಪಟ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ನೀಡಿದ 193 ರನ್ಗಳ ಗುರಿಯನ್ನು ಆರ್‌ಸಿಬಿ 19.1 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇತ್ತ ಪಂದ್ಯ ಮುಗಿಯುತ್ತಿದ್ದಂತೆ ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಕೆಕೆಆರ್‌ಗೆ ‘ಕರ್ಮ’ದ ಪಾಠ ಕಲಿಸಿದ್ದಾರೆ. “ಕೆಕೆಆರ್ ಮೀಡಿಯಾ ತಂಡ ಪ್ರೋಮೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಆರ್‌ಸಿಬಿ ಪಂದ್ಯ ಗೆಲ್ಲುವುದರಲ್ಲಿ ಬ್ಯುಸಿಯಾಗಿದೆ” ಎಂದು ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಸಿಂಹ ನೈಟ್ ರೈಡರ್ಸ್ ಅನ್ನು ಭೇಟೆಯಾಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಕಾಡಿನ ರಾಜ ಸಿಂಹನೇ ಎಂದು ಕೆಕೆಆರ್ ಕಾಲೆಳೆದಿದ್ದಾರೆ.
The funniest part about the same old banter is that it keeps getting quieter every year. 🤫
See you next year, Knights. Hopefully with some new material from this decade. ♥️#PlayBold pic.twitter.com/zANqtVO9Up
— Royal Challengers Bengaluru (@RCBTweets) May 13, 2026
ಇದರ ಜೊತೆಗೆ “ಮುಂದಿನ ವರ್ಷವಾದರೂ ಈ ದಶಕಕ್ಕೆ ಹೊಂದುವಂತಹ ಹೊಸ ಡೈಲಾಗ್ ಅಥವಾ ಮ್ಯಾಟರ್‌ಗಳ ಜೊತೆ ಬನ್ನಿ. ಕೆಕೆಆರ್ ಇನ್ನು ಹಳೆಯ ಇತಿಹಾಸ ಮತ್ತು ಹಳೇ ಡೈಲಾಗ್‌ಗಳನ್ನೇ ನಂಬಿಕೊಂಡಿದೆ ಎಂದು RCB ಲೇವಡಿ ಮಾಡಿದೆ.
ಒಟ್ಟಿನಲ್ಲಿ ಉಭಯ ತಂಡಗಳ ಪಂದ್ಯಗಳ ಮನರಂಜನೆಯ ಜೊತೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸೋಷಿಯಲ್ ಮೀಡಿಯಾ ಫೈಟ್ ಅಭಿಮಾನಿಗಳ ಪಾಲಿಗೆ ಭರಪೂರ ಮನರಂಜನೆ ನೀಡುತ್ತಿದೆ. ಮೈದಾನದ ಒಳಗಿನ ರೋಚಕ ಸಿಕ್ಸರ್-ಬೌಂಡರಿಗಳು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಈ ಡಿಜಿಟಲ್ ಜಿದ್ದಾಜಿದ್ದಿ ಐಪಿಎಲ್ ಕ್ರಿಕೆಟ್ ಹಬ್ಬದ ಮಜಾವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗಲಾರದು.
Published On – 10:38 am, Thu, 14 May 26
