
ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು (T20 World Cup 2026) ಗೆದ್ದುಕೊಂಡಿತು. ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ವಿಶ್ವಕಪ್ ಗೆದ್ದ ಭಾರತದ ಐದನೇ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಸ್ತುತ ಭಾರತ ಕ್ರಿಕೆಟ್ನ ಮನೆಮಾತಾಗಿರುವ ಸೂರ್ಯಕುಮಾರ್ ಯಾದವ್ಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ ಎಂದರೂ ತಪ್ಪಾಗಲಾರದು. ಏಕೆಂದರೆ ಸೂರ್ಯಕುಮಾರ್ ಅವರ ಮಡದಿ ಕರ್ನಾಟಕದ ಉಡುಪಿ ಮೂಲದವರು.
ಕಾಪು ಮಾರಿಯಮ್ಮನ ಪರಮ ಭಕ್ತ
ವಾಸ್ತವವಾಗಿ ಸೂರ್ಯಕುಮಾರ್ ಯಾದವ್ ಅವರ ವಿಶ್ವಕಪ್ ವಿಜೇತ ಹಾದಿ ಅಷ್ಟು ಸುಲಭವಾಗಿರಲಿಲ್ಲ. 2024 ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ಬಳಿಕ ರೋಹಿತ್ ಶರ್ಮಾ ನಾಯಕತ್ವ ತೊರೆದಿಲ್ಲದೆ, ಈ ಮಾದರಿಗೆ ವಿದಾಯ ಹೇಳಿದರು. ರೋಹಿತ್ ಜತೆಗೆ ಕೊಹ್ಲಿ ಕೂಡ ನಿವೃತ್ತಿ ಘೋಷಿಸಿದರು. ಈ ಇಬ್ಬರು ದಿಗ್ಗಜರ ಅನುಪಸ್ಥಿತಿಯಲ್ಲಿ ಟಿ20 ತಂಡದ ನಾಯಕತ್ವವಹಿಸಿಕೊಂಡ ಸೂರ್ಯ, ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದರು. ಆದಾಗ್ಯೂ ಆಟಗಾರನಾಗಿ ಸೂರ್ಯಕುಮಾರ್ ಯಶಸ್ವಿಯಾಗಿದ್ದಕ್ಕಿಂತ ಎಡವಿದ್ದೆ ಹೆಚ್ಚು. ಅಂತಹ ಸಂದರ್ಭದಲ್ಲಿ ಸೂರ್ಯಕುಮಾರ್ಗೆ ನೆನಪಾಗುತ್ತಿದ್ದದ್ದು, ಉಡುಪಿಯ ಕಾಪು ಮಾರಿಯಮ್ಮ.
ಹೌದು.. ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ನಿಂದ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಕಾಪು ಮಾರಿಯಮ್ಮನ ಸನ್ನಿಧಿಗೆ ಬಂದು ವಿಶೇಷ ಪೂಜೆಗಳಲ್ಲಿ ಭಾಗಿಯಾಗಿದ್ದಾರೆ. ಮೇಲೆ ಹೇಳಿದಂತೆ ಸೂರ್ಯಕುಮಾರ್ ಅವರ ಮಡದಿ ದೇವಿಶಾ ಶೆಟ್ಟಿ, ಉಡುಪಿ ಮೂಲದವರು. ಪ್ರಸ್ತುತ ಅವರು ಮುಂಬೈನಲ್ಲಿ ನೆಲೆಸಿದ್ದಾರೆ. ಆದಾಗ್ಯೂ ತನ್ನ ಮೂಲದ ನಂಟು ಬಿಡದ ದೇವಿಶಾ, ಆಗಾಗ್ಗೆ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.
9 ದಿನಗಳಲ್ಲಿ 9 ಕ್ಯಾಪ್ಟನ್ ಆಗಿ ಆಯ್ಕೆ
ಹೀಗಾಗಿ ಕಾಪು ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ದಂಪತಿಗಳು ಎರಡು ಬಾರಿ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ 2024, ಜುಲೈ 9 ರಂದು ಕಾಪು ಮಾರಿಗುಡಿಗೆ ಭೇಟಿ ನೀಡಿದ್ದ ಸೂರ್ಯ ಕುಮಾರ್ ಆಶೀರ್ವಾದ ಪಡೆದಿದ್ದರು. ಈ ವೇಳೆ ದೇಗುಲದ ಅರ್ಚಕರು, ಸೂರ್ಯ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಲೆಂದು ಶುಭಹಾರೈಸಿದ್ದರು. ಇದಾದ ಕೇವಲ ಒಂಬತ್ತು ದಿನಗಳಲ್ಲಿ ಸೂರ್ಯ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು.
ಟಿ20 ವಿಶ್ವಕಪ್ ಗೆದ್ದು ನಿವೃತ್ತಿಯ ಬಗ್ಗೆ ಮೌನ ಮುರಿದ ಸೂರ್ಯಕುಮಾರ್ ಯಾದವ್
ಹೀಗಾಗಿ ಕೋಟ್ಯಂತರ ವೆಚ್ಚದಲ್ಲಿ ಮರು ನಿರ್ಮಾಣಗೊಂಡ ಹೊಸ ಮಾರಿಗುಡಿ ನಿರ್ಮಾಣ ವೇಳೆ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಕಂಬವನ್ನು ಕೊಡುಗೆಯಾಗಿ ನೀಡಿದ್ದರು. ಇದೇ ವೇಳೆ ಟಿ20 ವಿಶ್ವಕಪ್ ಕಪ್ ಗದ್ದ ನಂತರ ಕ್ಷೇತ್ರಕ್ಕೆ ಬರಬೇಕೆಂದು ದೇಗುಲದ ಪ್ರಮುಖರು ಸಂಕಲ್ಪ ಮಾಡಿಕೊಂಡಿದ್ದು, ಅದರಂತೆ ಸೂರ್ಯಕುಮಾರ್ ಯಾದವ್ ಇಷ್ಟರಲ್ಲೇ ಉಡುಪಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ