ಕಾಫಿನಾಡಿನಲ್ಲಿ ಖಾದ್ಯಪ್ರಿಯರಿಗೆ ಶೋಕಿಂಗ್: ವಡೆಯಲ್ಲಿ ಸತ್ತ ಹಲ್ಲಿ, ಬೇಕರಿಯಲ್ಲಿ ಅವಧಿ ಮೀರಿದ ಸಾಸ್ ಬಳಸಿ ಕೊಳೆತ ಕೇಕ್ ಮಾರಾಟ – Kannada News | Chikkamagaluru Food Scare: Bakery’s Expired Cake, Hotel’s Lizard Vada Spark Outrage

ಚಿಕ್ಕಮಗಳೂರು ವಡೆಯಲ್ಲಿ ಹಲ್ಲಿ ಪತ್ತೆ

ಚಿಕ್ಕಮಗಳೂರು,ಆ.17 : ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ (Food Safety Raids) ನಡೆಸುತ್ತಿರುವ ಬೆನ್ನಲ್ಲೇ, ‘ಕಾಫಿನಾಡು’ ಚಿಕ್ಕಮಗಳೂರಿನಲ್ಲಿ ಕೇವಲ ಮೂರು ದಿನಗಳ ಅಂತರದಲ್ಲಿ ಎರಡು ಆಘಾತಕಾರಿ ಪ್ರಕರಣಗಳು ಪತ್ತೆಯಾಗಿವೆ. ಒಂದೆಡೆ ಕಳಸದ ಹೋಟೆಲ್‌ನಲ್ಲಿ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದರೆ, ಇನ್ನೊಂದೆಡೆ ಚಿಕ್ಕಮಗಳೂರು ನಗರದ ಪ್ರಸಿದ್ಧ ಬೇಕರಿಯಲ್ಲಿ ಎಕ್ಸ್‌ಪೈರಿ ದಿನಾಂಕ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ತಯಾರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ‘ಕೇಕ್ ಕಾರ್ನರ್’ ಬೇಕರಿಯಲ್ಲಿ ಕೇಕ್ ಖರೀದಿಸಿದ್ದ ಗ್ರಾಹಕರಿಗೆ ತೀವ್ರ ಕಹಿ ಅನುಭವವಾಗಿದೆ. ಬೇಕರಿಯಿಂದ ತಂದಿದ್ದ ಕೇಕ್ ತಿನ್ನಲು ಕಹಿಯಾಗಿದ್ದು, ಕೊಳೆತ ವಾಸನೆ ಬರುತ್ತಿತ್ತು. ಕೇಕ್ ಏಕೆ ಕಹಿಯಾಗಿದೆ ಎಂದು ಗ್ರಾಹಕರು ಸ್ಥಳದಲ್ಲೇ ಬೇಕರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಪರಿಶೀಲಿಸಿದಾಗ, ಕೇಕ್ ತಯಾರಿಕೆಗೆ ಬಳಸುತ್ತಿದ್ದ ಚಾಕೊಲೇಟ್ ಸಾಸ್ ಅವಧಿ ಮುಗಿದು ತಿಂಗಳುಗಳೇ ಕಳೆದಿರುವುದು ಬಯಲಾಗಿದೆ.

“ಈ ಕೇಕ್ ಅನ್ನು ಸಣ್ಣ ಮಕ್ಕಳು ತಿಂದಿದ್ದಾರೆ. ಒಂದು ವೇಳೆ ವಿಷಪೂರಿತವಾಗಿ ಮಕ್ಕಳಿಗೆ ಏನಾದರೂ ಹೆಚ್ಚು ಕಮ್ಮಿಯಾಗಿ ಆಸ್ಪತ್ರೆ ಸೇರಿದರೆ ಜವಾಬ್ದಾರಿ ಯಾರು? ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದೀರಾ?” ಎಂದು ಗ್ರಾಹಕರು ಬೇಕರಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೆದುಕೊಂಡಿದ್ದಾರೆ. “ಕೊಳೆತ ಕೇಕ್‌ಗೆ ಒಂದು ರೂಪಾಯಿಯನ್ನೂ ಕೊಡಲ್ಲ, ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೂ ಎರಡು ದಿನಗಳ ಮುನ್ನ, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನ ಖಾಸಗಿ ಹೋಟೆಲ್ ಒಂದರಲ್ಲಿ ಪ್ರವಾಸಿಗರಿಗೆ ನೀಡಲಾಗಿದ್ದ ವಡೆಯಲ್ಲಿ ಕರಿದ ಸತ್ತ ಹಲ್ಲಿ ಪತ್ತೆಯಾಗಿತ್ತು. ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದು ತಿಂಡಿ ಸೇವಿಸುವಾಗ ವಡೆಯಲ್ಲಿ ಹಲ್ಲಿ ಸಿಕ್ಕಿದ್ದು, ಅದಾಗಲೇ ಮಗು ವಡೆ ತಿಂದಿದ್ದರಿಂದ ಪೋಷಕರು ಕಂಗಾಲಾಗಿದ್ದರು. ಹೋಟೆಲ್ ಮಾಲೀಕರು ತಪ್ಪೊಪ್ಪಿಕೊಳ್ಳುವ ಬದಲು ಜಗಳಕ್ಕೆ ನಿಂತಾಗ ತುರ್ತು ಸಂಖ್ಯೆ 112 ಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಇದನ್ನೂ ಓದಿ: ರಾಯಚೂರಿನಲ್ಲಿ ಅಮಾನವೀಯ ಕೃತ್ಯ: ಜೀವಂತ ವೃದ್ಧನಿಗೆ ನಕಲಿ ಡೆತ್ ಸರ್ಟಿಫಿಕೇಟ್ ನೀಡಿ ಕೋಟಿ ಆಸ್ತಿ ಲೂಟಿ

ರಾಜ್ಯಾದ್ಯಂತ ಆಹಾರ ಭದ್ರತಾ ಅಧಿಕಾರಿಗಳು ದಾಳಿ ನಡೆಸುತ್ತಿದ್ದರೂ, ವ್ಯಾಪಾರಿಗಳ ಇಂತಹ ಬೇಜವಾಬ್ದಾರಿತನ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಅವಧಿ ಮೀರಿದ ಹಾಗೂ ಅಶುಚಿತ್ವದ ಆಹಾರ ಮಾರಾಟ ಮಾಡುವ ಇಂತಹ ಹೋಟೆಲ್ ಮತ್ತು ಬೇಕರಿಗಳ ಲೈಸೆನ್ಸ್ ರದ್ದುಗೊಳಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *