ಕಾರವಾರ-ಬಳ್ಳಾರಿಯಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಲಾಕ್ – Kannada News | Karnataka Lokayukta Cracks Down: Bribe Taking Officials and Illegal Assets Exposed

ಕಾರವಾರ, ಜೂ.23: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಬೇಟೆಯನ್ನು ತೀವ್ರಗೊಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಲಂಚ ಪಡೆಯುತ್ತಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದರೆ, ಇತ್ತ ಬಳ್ಳಾರಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ.

ಮುಂಡಗೋಡಿನಲ್ಲಿ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಲಾಕ್

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಎರಡು ಪ್ರತ್ಯೇಕ ಕಚೇರಿಗಳ ಮೇಲೆ ಕಾರವಾರ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ಧಾರವಾಡ ಮತ್ತು ಕಾರವಾರದ ಡಿವೈಎಸ್‌ಪಿ ಒಳಗೊಂಡ ಜಂಟಿ ತಂಡ ಭರ್ಜರಿ ದಾಳಿ ನಡೆಸಿದೆ. ಹೆಸ್ಕಾಂ ಇಂಜಿನಿಯರ್ ಧರ್ಮರಾಜ್ ಬೆಡಸಗಾಂವ್ ಎಂಬಾತ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಎಂಬವರಿಂದ 65,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಾರಾಯಣ ಅರೆಜೋಗಿ ಎಂಬುವರು ನಿರ್ಮಿಸುತ್ತಿದ್ದ ಫಾರ್ಮ್ ಹೌಸ್ ಲೈಸನ್ಸ್ ಮಾಡಿಕೊಡಲು 15,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಬಸವರಾಜ್ ಬಿಸ್ನಾಳ ಎಂಬಾತ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಬಳ್ಳಾರಿಯಲ್ಲಿ ಆರ್‌ಡಿಪಿಆರ್ ಇಂಜಿನಿಯರ್‌ಗೆ ಲೋಕಾ ಶಾಕ್

ಬಳ್ಳಾರಿ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಸಿರುಗುಪ್ಪ ತಾಲೂಕಿನ RDPR ಇಲಾಖೆಯ AEE ವ್ಯಾಸಗಾರ ತಿಪ್ಪೇಸ್ವಾಮಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಭರ್ಜರಿ ದಾಳಿ ನಡೆಸಲಾಗಿದೆ. ಬಳ್ಳಾರಿಯ ಹನುಮಾನ್ ನಗರ ಮತ್ತು ಕುಡಿತಿನಿ ಪಟ್ಟಣದ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ಇದನ್ನೂ ಓದಿ:ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!

ಲೋಕಾ ದಾಳಿಯಲ್ಲಿ ಪತ್ತೆಯಾದ ಅಕ್ರಮ ಆಸ್ತಿ ವಿವರ:

ಮನೆಯಲ್ಲಿ 300 ಗ್ರಾಂ ಚಿನ್ನದ ಆಭರಣ ಹಾಗೂ 800 ಗ್ರಾಂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಇಂಜಿನಿಯರ್ ಒಡೆತನದ ಒಟ್ಟು 6 ನಿವೇಶನಗಳ (Sites) ಪ್ರಮುಖ ದಾಖಲೆಗಳು ಲಭ್ಯವಾಗಿವೆ. ಮನೆಯಲ್ಲಿ 1 ಲಕ್ಷ ರೂಪಾಯಿ ನಗದು ಸಿಕ್ಕಿದ್ದು, ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ತಕ್ಷಣವೇ ಫ್ರೀಜ್ ಮಾಡಿದ್ದಾರೆ. ಮನೆಗಳ ಮೇಲಿನ ದಾಳಿಯ ಬೆನ್ನಲ್ಲೇ ಇಬ್ಬರು ಸಿಪಿಐ ನೇತೃತ್ವದ ತಂಡವು ಸಿರುಗುಪ್ಪ ನಗರದಲ್ಲಿರುವ ಆರ್‌ಡಿಪಿಆರ್ ಕಚೇರಿ ಮೇಲೂ ದಾಳಿ ನಡೆಸಿ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *