ಚಾಮರಾಜನಗರ, ಜು.24: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ ಗ್ರಾಮದ ಹೊರವಲಯದಲ್ಲಿ ಕಳೆದೆರಡು ದಿನಗಳಿಂದ ಹುಲಿಯೊಂದು ಬಿಂದಾಸ್ ಆಗಿ ಸಂಚರಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ರೈತರಲ್ಲಿ ತೀವ್ರ ಭೀತಿ ವಾತಾವರಣ ನಿರ್ಮಾಣವಾಗಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಬಫರ್ ವಲಯದ (Buffer Zone) ವ್ಯಾಪ್ತಿಗೆ ಬರುವ ರಂಗನಾಥಪುರ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಈ ಹುಲಿರಾಯ ಪ್ರತ್ಯಕ್ಷನಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೈತರು ಭಯಪಡುವಂತಾಗಿದೆ. ಇಂದು ಬೆಳಿಗ್ಗೆ ರೈತರು ಕಾರಿನಲ್ಲಿ ತಮ್ಮ ಜಮೀನಿನ ಕಡೆಗೆ ತೆರಳುತ್ತಿದ್ದಾಗ, ಮಾರ್ಗಮಧ್ಯದಲ್ಲೇ ಹುಲಿಯು ಜಮೀನಿನ ಹತ್ತಿರ ಹಾಯಾಗಿ ಓಡಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಜಾಗರೂಕರಾದ ರೈತರು, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಹುಲಿಯ ಬಿಂದಾಸ್ ಓಡಾಟದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ವೀಡಿಯೊ ಈಗ ಸ್ಥಳೀಯವಾಗಿ ವೈರಲ್ ಆಗುತ್ತಿದೆ. ಗ್ರಾಮದ ತೀರಾ ಹತ್ತಿರದಲ್ಲೇ ಹುಲಿ ಪ್ರತ್ಯಕ್ಷವಾಗುತ್ತಿರುವುದರಿಂದ ಜಾನುವಾರುಗಳನ್ನು ಮೇಯಿಸಲು ಹಾಗೂ ಜಮೀನುಗಳಲ್ಲಿ ಕೆಲಸ ಮಾಡಲು ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯಾಚರಣೆ ನಡೆಸಿ ಹುಲಿಯನ್ನು ಕೂಡಲೇ ಸೆರೆಹಿಡಿದು ದಟ್ಟ ಅರಣ್ಯಕ್ಕೆ ಅಟ್ಟಬೇಕು ಎಂದು ರಂಗನಾಥಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
