ಕಾರು ಸ್ಫೋಟಿಸಿಕೊಂಡು ಆತ್ಮಹತ್ಯೆ ಕೇಸ್: ಉತ್ತರ ಕನ್ನಡದಲ್ಲಿ ನಾಡಬಾಂಬ್​ ಮಾರಾಟ ಜಾಲ ಪತ್ತೆ – Kannada News | Car Explosion Uncovers Illegal Explosives Network in Uttara Kannada

ನಾಡಬಾಂಬ್, ನಾಗೇಂದ್ರImage Credit source: tv9 kannada

ತುಮಕೂರು, ಜುಲೈ 01: ಪ್ರೇಮ ವೈಫಲ್ಯದಿಂದ ಕಾರಿನಲ್ಲೇ ಸ್ಫೋಟಿಸಿಕೊಂಡು ನಾಗೇಂದ್ರ (Nagendra) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ್ಕೆ ಬಳಸಿದ್ದ ನಾಡಬಾಂಬ್ (Crude Bomb) ತನಿಖೆಯ ದಿಕ್ಕನ್ನೇ ಬದಲಿಸಿತು. ಸ್ಫೋಟದ ಬೆನ್ನು ಬಿದ್ದ ತುಮಕೂರು (Tumakuru) ಪೊಲೀಸರ ತನಿಖೆಯಲ್ಲಿ ಉತ್ತರ ಕನ್ನಡದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಅಕ್ರಮ ನಾಡಬಾಂಬ್ ಮಾರಾಟ ಜಾಲ ಬಯಲಾಗಿದ್ದು, ಈ ಪ್ರಕರಣಕ್ಕೆ ಮತ್ತಷ್ಟು ಹೊಸ ಆಯಾಮ ಸಿಕ್ಕಿದೆ. ಅಸಲಿಗೆ ನಾಗೇಂದ್ರನಿಗೆ ಬಾಂಬ್ ಪೂರೈಕೆ ಮಾಡಿದ ಆರೋಪಿಯ ಸುಳಿವಿನಿಂದ ಹಿಡಿದು ಬಾಂಬ್ ಖರೀದಿ ಸಂಪರ್ಕದವರೆಗೂ ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲಾಗಿದ್ದು, ಪ್ರತ್ಯೇಕ ತನಿಖೆ ಸಹ ಆರಂಭವಾಗಿದೆ.

ಅಕ್ರಮ ಬಾಂಬ್ ಮಾರಾಟ ಜಾಲ ಪತ್ತೆ

ಪ್ರೇಮ ವೈಫಲ್ಯದಿಂದ ಕಾರಿನಲ್ಲೇ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ನಾಗೇಂದ್ರ ಪ್ರಕರಣ ಆರಂಭದಲ್ಲಿ ಕೇವಲ ಆತ್ಮಹತ್ಯೆ ಎನ್ನಲಾಗಿತ್ತು. ಆದರೆ ಕಾರು ಸ್ಫೋಟಕ್ಕೆ ಬಳಸಿದ್ದ ನಾಡಬಾಂಬ್ ತನಿಖಾಧಿಕಾರಿಗಳ ಯೋಚನೆಯ ದಿಕ್ಕನ್ನೇ ಬದಲಿಸಿತು. ಹೀಗಾಗಿ ತುಮಕೂರು ಎಸ್‌ಪಿ ಅಶೋಕ್ ಸೂಚನೆ ಮೇರೆಗೆ ಶಿರಾ ಡಿವೈಎಸ್ಪಿ ಶೇಖರ್ ನೇತೃತ್ವದ ತಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನ ಬೀಡುಬಿಟ್ಟು ತನಿಖೆ ಮಾಡಿದ್ದಾರೆ. ಈ ವೇಳೆ ನಾಗೇಂದ್ರ ಬಳಸಿದ್ದ ನಾಡಬಾಂಬ್‌ನ ಮೂಲ ಪತ್ತೆಯಾಗಿದ್ದು, ಅಕ್ರಮ ಬಾಂಬ್ ಮಾರಾಟ ಜಾಲವೂ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹುಚ್ಚಾಟ ಮೆರೆದು ದಾರುಣ ಅಂತ್ಯಕಂಡ ಪಾಗಲ್​​ ಪ್ರೇಮಿ: ನಾಗೇಂದ್ರಗೆ ಸ್ಫೋಟಕ ಸಿಕ್ಕಿದ್ದೇಗೆಂದು ಖಾಕಿ ತನಿಖೆ

ತನಿಖೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಚಂದಾವರದ ಗ್ರಾಮದ ಕೆರೆಯಲ್ಲಿ ಮೀನು ಬೇಟೆಗೆ ಬಳಸುವ ನಾಡಬಾಂಬ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ. ಪೊಟಾಶಿಯಂ ನೈಟ್ರೇಟ್, ಸಲ್ಫರ್ ಹಾಗೂ ಅಲ್ಯೂಮಿನಿಯಂ ಪೌಡರ್ ಬಳಸಿ ತಯಾರಿಸಲಾಗುತ್ತಿದ್ದ ಈ ಸ್ಫೋಟಕಗಳನ್ನು ಜಾರ್ಜ್ ನಿಕೋಲಸ್ ಫರ್ನಾಂಡೀಸ್ ಎಂಬಾತ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಪರಿಚಿತನೊಬ್ಬನ ಮೂಲಕ ಜಾರ್ಜ್ ಪರಿಚಯ ಮಾಡಿಕೊಂಡ ನಾಗೇಂದ್ರ, ಕೃತ್ಯಕ್ಕೆ ಒಂದು ವಾರ ಮುಂಚೆಯೇ ಮೂರು ನಾಡಬಾಂಬ್ ಖರೀದಿಸಿ ತನ್ನ ಪ್ಲ್ಯಾನ್ ರೂಪಿಸಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಚ್ಚಾ ಸ್ಫೋಟಕ ವಸ್ತುಗಳ ನಾಶ

ಅಸಲಿಗೆ ಜೂನ್ 27ರಂದು ನಾಗೇಂದ್ರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಜಾರ್ಜ್ ಎಚ್ಚೆತ್ತುಕೊಂಡಿದ್ದಾನೆ ಎನ್ನಲಾಗಿದೆ. ತನ್ನ ಬಳಿ ಇದ್ದ ಕಚ್ಚಾ ಸ್ಫೋಟಕ ವಸ್ತುಗಳನ್ನು ಹರಿಯುವ ನೀರಿಗೆ ಎಸೆದು ನಾಶಪಡಿಸಿದ್ದಾನೆ. ಬಳಿಕ ಪೊಲೀಸರು ಮನೆ ಬಾಗಿಲು ತಟ್ಟುವ ಆತಂಕದಿಂದ ಅನಾರೋಗ್ಯಕ್ಕೀಡಾಗಿದ್ದು, ಸದ್ಯ ಉತ್ತರ ಕನ್ನಡದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಕಳ್ಳಂಬೆಳ್ಳ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ನಾಗೇಂದ್ರ ಸಂಬಂಧಿಕರ ಬಂಧನ

ಇನ್ನು ಇದೆಲ್ಲದರ ನಡುವೆ ನಾಗೇಂದ್ರ ಮಾತ್ರವಲ್ಲದೇ ಅವನ ಸಂಬಂಧಿಕರಾದ ಸಂದೀಪ್ ಗೌಡ, ನಾರಾಯಣ ಡೊಲ್ಲುಗೌಡ ಹಾಗೂ ನಾಗರಾಜು ಡೊಲ್ಲುಗೌಡ ಕೂಡ ಇದೇ ಜಾರ್ಜ್‌ನಿಂದ ನಾಡಬಾಂಬ್ ಖರೀದಿಸಿದ್ದ ವಿಚಾರವು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಇದೀಗ ನಾಗೇಂದ್ರ ಬಳಿಯಿದ್ದ ಬಾಂಬ್ ಮತ್ತು ಸಂಬಂಧಿಕರಿಂದ ವಶಪಡಿಸಿಕೊಂಡ ಬಾಂಬ್‌ಗಳ ಮಾದರಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಅಗತ್ಯವಿದ್ದರೆ ಬಂಧಿತ ಸಂಬಂಧಿಕರ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ

ಒಟ್ಟಾರೆ, ಪಾಗಲ್ ಪ್ರೇಮಿಯ ಸೈಕೋ ಕೃತ್ಯದ ನಡುವೆ ಸೃಷ್ಟಿಯಾಗಿದ್ದ ನಾಡಬಾಂಬ್ ಗೊಂದಲಕ್ಕೆ ಕೊನೆಗೂ ಖಾಕಿ ಉತ್ತರ ಪತ್ತೆ ಮಾಡಿದ್ದಾರೆ. ಆದರೆ ಇದರೊಳಗಿನ ಮತ್ತಷ್ಟು ಸಂಗತಿ ಪೊಲೀಸರ ತನಿಖೆಯಿಂದಷ್ಟೇ ಹೊರ ಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *