ಭಾರತೀಯ ಮಜ್ದೂರ್ ಸಂಘದ ವತಿಯಿಂದ ಎರಡು ವರ್ಷದ ಹಿಂದೆ ನಡೆದ ಕಾರ್ಮಿಕರ ಪ್ರತಿಭಟನೆಯ ಸಾಂದರ್ಭಿಕ ಚಿತ್ರImage Credit source: PTI
ನವದೆಹಲಿ, ಆಗಸ್ಟ್ 13: ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ದೇಶಾದ್ಯಂತ ಆಗಸ್ಟ್ 17, ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಲು ಆರೆಸ್ಸೆಸ್ನ ಕಾರ್ಮಿಕ ವಿಭಾಗವಾದ ಭಾರತೀಯ ಮಜ್ದೂರ್ ಸಂಘ (BMS) ಕರೆ ನೀಡಿದೆ. ಬಿಎಂಎಸ್ ಕೇಂದ್ರ ಕಾರ್ಯಕಾರಿ ಸಮಿತಿ (KKS) ನಿರ್ಧಾರದಂತೆ, ದೇಶದ 28 ರಾಜ್ಯ ಘಟಕಗಳು ಹಾಗೂ 42 ಕೈಗಾರಿಕಾ ಫೆಡರೇಶನ್‌ಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಮತ್ತು ರ‍್ಯಾಲಿಗಳನ್ನು ಆಯೋಜಿಸಲಿವೆ. ಈ ಮೂಲಕ ಪ್ರಧಾನಮಂತ್ರಿ, ಹಣಕಾಸು ಸಚಿವರು ಹಾಗೂ ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಬಿಎಂಎಸ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಮಜ್ದೂರ್ ಸಂಘ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು
- ಪಿಂಚಣಿ ಹಾಗೂ ಇಎಸ್‍ಐ ಸೌಲಭ್ಯ: EPS-95 ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು ₹7,500 ಕ್ಕೆ ಏರಿಕೆ ಮಾಡಬೇಕು ಮತ್ತು ಆಯುಷ್ಮಾನ್ ಭಾರತ್ ಯೋಜನೆಗೆ ಜೋಡಿಸಬೇಕು. ESI ಗರಿಷ್ಠ ವೇತನ ಮಿತಿಯನ್ನು ₹21,000 ರಿಂದ ₹42,000 ಕ್ಕೆ ಹಾಗೂ EPF ಮಿತಿಯನ್ನು ₹15,000 ರಿಂದ ₹30,000 ಕ್ಕೆ ಹೆಚ್ಚಿಸಬೇಕು.
- ವೇತನ ಮತ್ತು ಗ್ರಾಚ್ಯುಟಿ: ಗ್ರಾಚ್ಯುಟಿ ಲೆಕ್ಕಾಚಾರವನ್ನು 15 ದಿನಗಳ ವೇತನದಿಂದ 30 ದಿನಗಳಿಗೆ ಹೆಚ್ಚಿಸಬೇಕು. ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸಬೇಕು.
- ಸ್ಕೀಮ್ ವರ್ಕರ್ಸ್‌ಗೆ ಗೌರವಧನ: ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ನೌಕರರ ಮಾಸಿಕ ಗೌರವಧನವನ್ನು ಹೆಚ್ಚಿಸಬೇಕು.
- ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ: ಹಳೆಯ ಪಿಂಚಣಿ ಯೋಜನೆಯನ್ನು (OPS) ತಕ್ಷಣವೇ ಮರುಸ್ಥಾಪಿಸಬೇಕು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
- ಬ್ಯಾಂಕಿಂಗ್ ವ್ಯವಸ್ಥೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ದಿನಗಳ ಕೆಲಸದ ಅವಧಿಯನ್ನು ಜಾರಿಗೊಳಿಸಬೇಕು.
- ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ವೇತನ ವಂಚನೆ ಮಾಡುವ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ: ಸರ್ಕಾರದ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ
ಕಾರ್ಮಿಕ ಕಾಯ್ದೆಗಳಿಗೆ ವಿರೋಧ
ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಸಂಹಿತೆಗಳಲ್ಲಿರುವ (IR Code ಮತ್ತು OSH&WC Code) ಕಾರ್ಮಿಕ ವಿರೋಧಿ ಅಂಶಗಳನ್ನು ಬಿಎಂಎಸ್ ತೀವ್ರವಾಗಿ ವಿರೋಧಿಸಿದೆ. ಕೇಂದ್ರ ಸರ್ಕಾರವು ತಕ್ಷಣವೇ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಈ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತರಬೇಕು ಹಾಗೂ ಶೀಘ್ರವೇ ‘ಭಾರತೀಯ ಕಾರ್ಮಿಕ ಸಮ್ಮೇಳನ’ (Indian Labour Conference) ಕರೆಯಬೇಕು ಎಂದು ಆಗ್ರಹಿಸಿದೆ.
ದೇಶದಲ್ಲಿ 1 ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿರುವ ಸ್ಕೀಮ್ ವರ್ಕರ್ಸ್‌ಗಳನ್ನು ಕಾರ್ಮಿಕರೆಂದು ಗುರುತಿಸಿ, ಅವರಿಗಾಗಿ ಪ್ರತ್ಯೇಕ ಸಮಗ್ರ ನೀತಿಯನ್ನು ರೂಪಿಸುವಂತೆ ಸರ್ಕಾರವನ್ನು ಬಿಎಂಎಸ್ ಒತ್ತಾಯಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
