ಪರಾರಿ ಆಗಿರುವ ಕಾಡಾನೆImage Credit source: tv9 kannada
ಹಾಸನ, ಏಪ್ರಿಲ್ 16: ಏಪ್ರಿಲ್ 12ರ ಭಾನುವಾರದಂದು ರೈತನನ್ನ ಬಲಿ ಪಡೆದಿದ್ದ ಒಂಟಿ ಸಲಗ (Elephant) ಸೆರೆಹಿಡಿಯಲು ನಡೆಸಿದ ಕಾರ್ಯಚರಣೆ ವಿಫಲವಾಗಿದೆ. ಇಡೀ ದಿನ ಸುಗ್ರೀವ, ಅಯ್ಯಪ್ಪ, ಧನಂಜಯ, ಏಕಲವ್ಯ ಸೇರಿ ಆರು ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಬೃಹತ್ ಒಂಟಿ ಸಲಗವನ್ನ ಸೆರೆಹಿಡಿದು ಎಳೆದುಕೊಂಡು ಹೋಗುವ ವೇಳೆ ಸಾಕಾನೆಗಳ ಜೊತೆ ರಣಭೀಕರ ಫೈಟ್ ನಡೆಸಿದ ಕಾಡಾನೆ ಕೊರಳು, ಕಾಲಿಗೆ ಕಟ್ಟಿದ್ದ ಹಗ್ಗವನ್ನ ತುಂಡರಿಸಿ ಶರವೇಗದಲ್ಲಿ ಕಾಫಿತೋಟದಲ್ಲಿ ಪರಾರಿಯಾಗಿದೆ. ಆ ಮೂಲಕ ಕಾರ್ಯಾಚರಣೆ ನಡೆಸಿದ್ದ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದೆ. ಸದ್ಯ ಆತಂಕಗೊಂಡಿರುವ ಜನರು ಕಾಡಾನೆ ಸೆರೆಗೆ ಆಗ್ರಹಿಸಿದ್ದಾರೆ.
ಅರವಳಿಕೆ ನೀಡಿದ್ದರೂ ಪರಾರಿ ಆದ ಕಾಡಾನೆ
ಏಪ್ರಿಲ್ 12ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತ ರಾಜಶೆಟ್ಟಿ ಎಂಬುವವರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನ ಸೆರೆಹಿಡಿಯುವಂತೆ ಜನರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಇಂದು ಕೊಡಗಿನ ಸಾಕಾನೆ ಶಿಬಿರಗಳಿಂದ ಆರು ಸಾಕಾನೆಗಳನ್ನ ಕರೆತಂದು ಬೇಲೂರು ತಾಲ್ಲೂಕಿನ ಕಿತ್ತಾವರ ಗ್ರಾಮದ ಕಾಫಿತೋಟದಲ್ಲಿ ಅಡಗಿದ್ದ ಸಲಗವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಡಿಸಿಎಫ್ ಸೌರಭ್ ಕುಮಾರ್, ಎಸಿಎಫ್ ಸೇರಿ 70ಕ್ಕೂ ಹೆಚ್ಚು ಸಿಬ್ಬಂದಿ, ವನ್ಯಜೀವಿ ವೈದ್ಯರು ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಸೆರೆಹಿಡಿಯಲಾಗಿತ್ತು.
ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದುರಂತ; ಕಾವಾಡಿಗನ ಮೇಲೆ ದಾಳಿ ಮಾಡಿದ ಸಾಕಾನೆ ‘ಸುಗ್ರೀವ’!
ಕುತ್ತಿಗೆ, ಕಾಲುಗಳಿಗೆ ಹಗ್ಗ ಕಟ್ಟಿ ಎಳೆತಂದು ಲಾರಿಗೆ ಹತ್ತಿಸುತ್ತಿರುವ ವೇಳೆ ಕಾಫಿತೋಟದೊಳಗೆ ಸುಮಾರು ಒಂದು ಗಂಟೆ ಸಾಕಾನೆಗಳ ಜೊತೆಗೆ ಫೈಟ್ ನಡೆಸಿದ ಸಲಗ ಒಂದೇ ಒಂದು ಹೆಜ್ಜೆ ಮುಂದೆ ಇಡಲಿಲ್ಲ. ಏನೇ ಪ್ರಯತ್ನಪಟ್ಟರು ಜಗ್ಗದ ಸಲಗವನ್ನ ಸಾಕಾನೆಗಳು ಎಳೆದು ತರುತ್ತಿರುವ ವೇಳೆ ಒಂದೊಂದೇ ಹಗ್ಗವನ್ನ ಕಿತ್ತುಕೊಂಡ ಪರಾರಿ ಆಗಿದೆ. ಬಲಿಷ್ಟ ಸಲಗದ ಎದುರು ಸಾಕಾನೆಗಳು ಮಂಡಿಯೂರಿವೆ. ಕಾಡಾನೆ ತಪ್ಪಿಸಿಕೊಂಡು ಹೋಗಿರುವುದು ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಮಾಡಿದ್ದು, ಶೀಘ್ರ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.
ಬೆಳೆ ಹಾನಿ: ಜನರ ಜೀವಕ್ಕೂ ಕುತ್ತು
ಹಾಸನ ಜಿಲ್ಲೆಯ ಮಲೆನಾಡು ಭಾಗದವಾದ ಆಲೂರು ಬೇಲೂರು ಸಕಲೇಶಫುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೀಡುಬಿಟ್ಟರುವ 80ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ಹಾನಿ ಮಾಡುವುದರ ಜೊತೆಗೆ ಜನರ ಜೀವ ಹಾನಿಯೂ ಉಂಟು ಮಾಡುತ್ತಿವೆ. ಜಿಲ್ಲೆಯಲ್ಲಿ ಎರಡು ದಶಕದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಕೂಡ ಓರ್ವ ರೈತ ಬಲಿಯಾದಾಗ ಜನರು ಹೋರಾಟ ಮಾಡಿದ್ದರು. ಎಲ್ಲಾ ಆನೆಗಳನ್ನ ಸ್ಥಳಾಂತರ ಮಾಡುವ ಭರವಸೆ ನೀಡಿ ಎಂದು ಪಟ್ಟುಹಿಡಿದಿದ್ದರು. ಕಡೆಗೂ ಅರಣ್ಯ ಇಲಾಖೆ ಹಂತಕ ಆನೆ ಸೆರೆಗೆ ಅನುಮತಿ ನೀಡಿತ್ತು. ಹಾಗಾಗಿ ಇಂದು ಸುಗ್ರೀವ, ಅಯ್ಯಪ್ಪ, ಧನಂಜಯ, ಏಕಲವ್ಯ, ಶ್ರೀರಾಮ ಸೇರಿ ಆರು ಆನೆಗಳ ನೇತೃತ್ವದಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಆದ ಎಡವಟ್ಟಿನಿಂದ ಸೆರೆ ಹಿಡಿದಿದ್ದ ಬೃಹತ್ ಗಾತ್ರದ ಸಲಗ ಮತ್ತೆ ತಪ್ಪಿಸಿಕೊಂಡು ಕಾಫಿತೋಟದಲ್ಲಿ ಪರಾರಿ ಆಗಿದೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಸಾವು: ದಾರುಣವಾಗಿ ಮೃತಪಟ್ಟ ಹಾಸನದ ರೈತ
ಜಿಲ್ಲೆಯ ಮನೆನಾಡು ಭಾಗದ ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿರುವ ಕಾಡಾನೆ ಹಾವಳಿ ತಡೆಗೆ ಆನೆ ಸೆರೆ ಹಿಡಿದು ಸ್ಥಳಾಂತರ ಮಾಡುವುದು ಪರಿಹಾರ. ಹೀಗೆ ಸೆರೆ ಹಿಡುವ ಕಾರ್ಯಾಚರಣೆ ವೇಳೆ ಇದೇ ಮೊದಲ ಬಾರಿಗೆ ಸಾಕಾನೆಗಳನ್ನೆ ಮಣ್ಣು ಮುಕ್ಕಿಸಿದ ಸೆರೆಯಾಗಿದ್ದ ಸಲಗ ಎಸ್ಕೇಪ್ ಆಗಿದೆ. ಸದ್ಯ ಅರಣ್ಯ ಇಲಾಖೆಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
