ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ದೆಹಲಿ ಹೈಕೋರ್ಟ್ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಶೀಘ್ರದಲ್ಲೇ ತೆರೆಕಾಣಲಿರುವ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗೆಸಿ’ (Kala Hiran: The Battle for Legacy) ಹಿಂದಿ ಸಿನಿಮಾದ ಟೀಸರ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿರುವ ಪ್ರಚಾರದ ಲಿಂಕ್‌ಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಈ ಚಿತ್ರದ ಪ್ರಚಾರದ ಸಾಮಗ್ರಿಗಳು 1998ರ ಕೃಷ್ಣಮೃಗ ಬೇಟೆ (Blackbuck Poaching Case) ಪ್ರಕರಣಕ್ಕೆ ಸಲ್ಮಾನ್ ಖಾನ್ ಅವರ ಹೆಸರನ್ನು ನೇರವಾಗಿ ಲಿಂಕ್ ಮಾಡುವಂತಿದ್ದು, ಇದು ನಟನ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
‘ಒಮ್ಮೆ ಹೋದ ಗೌರವ ಮತ್ತೆ ಸಿಗಲ್ಲ’: ಹೈಕೋರ್ಟ್
ಚಿತ್ರದ ಬಿಡುಗಡೆ ಹಾಗೂ ಪ್ರಚಾರಕ್ಕೆ ಮಧ್ಯಂತರ ತಡೆ ಕೋರಿ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠವು ಚಿತ್ರ ನಿರ್ಮಾಪಕ ಅಮಿತ್ ಜಾನಿ ನೀಡಿದ್ದ ಸಂದರ್ಶನಗಳ ವೀಡಿಯೋಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ. ವಿಚಾರಣೆ ವೇಳೆ ಮೌಖಿಕವಾಗಿ ಗರಂ ಆದ ನ್ಯಾಯಪೀಠ, ‘ಇದು ಇಲ್ಲಿಗೆ ನಿಲ್ಲಬೇಕು. ಒಮ್ಮೆ ಹೋದ ಗೌರವ ಮತ್ತೆ ಎಂದಿಗೂ ಸಿಗುವುದಿಲ್ಲ’ ಎಂದು ಎಚ್ಚರಿಸಿದೆ.
ಅಲ್ಲದೆ, ಚಿತ್ರದ ಪ್ರಚಾರದ ವೀಡಿಯೋಗಳು ಸಲ್ಮಾನ್ ಖಾನ್ ಹಾಗೂ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ವಿವಾದವನ್ನು ಮತ್ತೆ ಪ್ರಚೋದಿಸುವಂತಿವೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಆರಂಭ ಆಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಅವರು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳಿಸಿದ್ದರು. ಬಳಿಕ ನ್ಯಾಯಾಲಯ ಮೆಟ್ಟಿಲೇರಿದ್ದರು.
ಸಲ್ಮಾನ್ ಖಾನ್ ಅರ್ಜಿಯಲ್ಲೇನಿತ್ತು?
ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೆಸರು ಬಳಸದಿದ್ದರೂ, ಪ್ರಚಾರದ ಪೋಸ್ಟರ್ ಹಾಗೂ ಟೀಸರ್‌ನಲ್ಲಿ ಸಲ್ಮಾನ್ ಅವರನ್ನೇ ಹೋಲುವ ನಟ, ಅವರ ಪ್ರಸಿದ್ಧ ಬ್ಲೂ ಬ್ರೇಸ್‌ಲೆಟ್ ಧರಿಸಿರುವುದನ್ನು ತೋರಿಸಲಾಗಿತ್ತು. ಗನ್ ಹಿಡಿದಿರುವ ದೃಶ್ಯಗಳನ್ನು ತೋರಿಸಿ ಸಲ್ಮಾನ್ ಖಾನ್ ಅವರ ಇಮೇಜ್‌ಗೆ ಧಕ್ಕೆ ತರಲು ಯತ್ನಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಸಲ್ಮಾನ್ ಈಗಾಗಲೇ ಖುಲಾಸೆಯಾಗಿದ್ದರೂ, ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ನಟ ದೂರಿದ್ದಾರೆ.
ಇದನ್ನೂ ಓದಿ: 2027ಕ್ಕೆ ಮುಂದೂಡಿಕೆ ಆಯ್ತಾ ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರದ ರಿಲೀಸ್?
ವ್ಯಕ್ತಿತ್ವದ ಹಕ್ಕಿನ ಉಲ್ಲಂಘನೆ:
ನಿರ್ಮಾಪಕ ಅಮಿತ್ ಜಾನಿ ಅವರು ತಮ್ಮ ಸಂದರ್ಶನ ಹಾಗೂ ಪೋಸ್ಟ್‌ಗಳಲ್ಲಿ ಸಲ್ಮಾನ್ ಖಾನ್, ಕೃಷ್ಣಮೃಗ ಪ್ರಕರಣ ಹಾಗೂ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬಳಸಿ ಪಬ್ಲಿಸಿಟಿ ಗಿಮಿಕ್ ಮಾಡುತ್ತಿದ್ದಾರೆ. ಸಮ್ಮತಿಯಿಲ್ಲದೆ ನಟನ ವೈಯಕ್ತಿಕ ಇಮೇಜ್ ಬಳಸಿಕೊಳ್ಳುವುದು ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಲ್ಮಾನ್ ಖಾನ್ ಅವರ ವಕೀಲರು ವಾದಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
