Headlines

ಕಾವೇರಿ ಜಲ ವಿವಾದ: ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು – Kannada News | Cauvery Row: Minister Ramalinga Reddy Counters Udhayanidhi Stalin, Says ‘Water Release Depends on CWMA, Not Karnataka’

Ramalinga Reddy Counters Udayanidhi Stalin Over Cauvery Water DisputeImage Credit source: Ramalinga Reddy and Udyanidhi Stalin Facebook Account

ಬೆಂಗಳೂರು, ಜುಲೈ 09: ಕರ್ನಾಟಕದಿಂದ ಕಾವೇರಿ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಮತ್ತು ತಮಿಳುನಾಡು ಸರ್ಕಾರದ ಪರವಾಗಿ ಯಾರೂ ನೀರು ಕೇಳಿಲ್ಲ ಎಂದು ಕರ್ನಾಟಕದ ಜಲಸಂಪನ್ಮೂಲ ಸಚಿವರು ಹೇಳಿರುವುದು ನಮ್ಮ ರೈತರಲ್ಲಿ ತೀವ್ರ ಆಘಾತ ಉಂಟುಮಾಡಿದೆ ಎಂಬ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್​​ ಹೇಳಿಕೆಗೆ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ. ಕರ್ನಾಟಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂಬ ರೀತಿಯ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಗೆ ಅಲ್ಪ ಪ್ರಮಾಣದ ನೀರಿನ ಹರಿವು ಬರುತ್ತಿರುವುದು ಮತ್ತು ಅವುಗಳಲ್ಲಿನ ಕಡಿಮೆ ನೀರಿನ ಸಂಗ್ರಹದ ಕಾರಣ ಕರ್ನಾಟಕದಿಂದ ನೀರು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

‘ನೀರು ಬಿಡುಗಡೆ ತೀರ್ಮಾನ ಕರ್ನಾಟಕ ಸರ್ಕಾರದ್ದಲ್ಲ’

ಅಲ್ಲದೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು (CWMA), ಕಾವೇರಿ ಜಲ ನಿಯಂತ್ರಣ ಸಮಿತಿ (CWRC)ಯ ಶಿಫಾರಸುಗಳ ಆಧಾರದ ಮೇಲೆ ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿದೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. 2026ರ ಜೂನ್ 30ರ ವೇಳೆಗೆ, ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಒಟ್ಟು ಜೀವಂತ ನೀರಿನ ಸಂಗ್ರಹ (Live Storage) 15.761 ಟಿಎಂಸಿ ಮಾತ್ರ ಇದ್ದು, ಇದು ಮುಂದಿನ ಮೂರು ತಿಂಗಳು ರಾಜ್ಯದ ಕುಡಿಯುವ ನೀರಿನ ಅಗತ್ಯ ಪೂರೈಸಲು ಸಾಕಾಗುವುದಿಲ್ಲ.

ಇದನ್ನೂ ಓದಿ: ಸಂಪೂರ್ಣ ಬತ್ತಿದ ಕಾವೇರಿ ನದಿ; ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ

2026ರ ಜೂನ್ 30ರಂದು ನಡೆದ CWRC ಸಭೆಯವರೆಗೆ, ಈ ನಾಲ್ಕು ಜಲಾಶಯಗಳಿಗೆ ಒಟ್ಟು 4.05 ಟಿಎಂಸಿ ನೀರು ಹರಿದು ಬಂದಿದೆ. 2026ರ ಜೂನ್ 16 ಮತ್ತು ಜೂನ್ 30ರಂದು ನಡೆದ CWRC ಸಭೆಗಳಲ್ಲಿ ಹಾಗೂ ಜೂನ್ 23ರಂದು ನಡೆದ CWMA ಸಭೆಯಲ್ಲಿ, ಬೆಂಗಳೂರು ಮಹಾನಗರ ಪ್ರದೇಶ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಹಾಗೂ ಇತರೆ ನಗರಗಳ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲು ಈ ನಾಲ್ಕು ಜಲಾಶಯಗಳಲ್ಲಿನ ನೀರನ್ನು ಸಂರಕ್ಷಿಸಬೇಕಾಗಿದೆ ಎಂದು ಕರ್ನಾಟಕ ತನ್ನ ವಾದ ಮಂಡಿಸಿತ್ತು. ಕರ್ನಾಟಕದ ಈ ವಾದವನ್ನು ಪರಿಗಣಿಸಿದ ಬಳಿಕ CWMA ಮತ್ತು CWRC ಕೆಲ ತೀರ್ಮಾನಗಳನ್ನು ಕೈಗೊಂಡಿದ್ದವು ಎಂದವರು ತಿಳಿಸಿದ್ದಾರೆ.

ಉದಯನಿಧಿ ಸ್ಟಾಲಿನ್​​ ಏನು ಹೇಳಿದ್ದರು?

ಕರ್ನಾಟಕದ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರ ಹೇಳಿಕೆ ಬಗ್ಗೆ ಈಗಾಗಲೇ ಬೆಳೆ ಸಾಲ ಮನ್ನಾ ಹೆಸರಿನಲ್ಲಿ ರೈತರನ್ನು ಮೋಸಗೊಳಿಸಿರುವ ಮುಖ್ಯಮಂತ್ರಿ ಏನು ಉತ್ತರ ನೀಡಲಿದ್ದಾರೆ? ಸ್ಟಾಲಿನ್​​ ಅವರ ಆಡಳಿತದ ಕಳೆದ ಐದು ವರ್ಷಗಳಲ್ಲೂ, ಪ್ರತಿ ವರ್ಷ ಜೂನ್ 12ರಂದು ಮೇಟ್ಟೂರು ಅಣೆಕಟ್ಟಿನಿಂದ ಕುರುವೈ ಬೆಳೆಗಾಗಿ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಇಂದಿನವರೆಗೂ ಮೇಟ್ಟೂರು ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಮಾಡುತ್ತಿರುವ ಪ್ರಯತ್ನದ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಅಂಗೀಕರಿಸಿದಾಗ, ಆ ನಿರ್ಣಯವನ್ನು ತಮಿಳುನಾಡಿನ ಎಲ್ಲಾ ಪಕ್ಷಗಳ ಪ್ರತಿನಿಧಿಗಳು ಒಟ್ಟಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನಾನು ಹೇಳಿದ್ದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದಂತೆ, ಜೂನ್ ತಿಂಗಳಲ್ಲಿ ನೀಡಬೇಕಿದ್ದ 9.91 ಟಿಎಂಸಿ ನೀರನ್ನು ಕರ್ನಾಟಕ ಬಿಡುಗಡೆ ಮಾಡದಿರುವ ವಿಷಯವನ್ನೂ ನಾನು ಪ್ರಸ್ತಾಪಿಸಿದ್ದೆ. ಈ ಎಲ್ಲ ವಿಚಾರಗಳಿಗೆ ಮುಖ್ಯಮಂತ್ರಿ ಯಾವುದೇ ಉತ್ತರ ನೀಡದಿರುವ ನಡುವೆಯೇ, ಈಗ ಜುಲೈ ತಿಂಗಳಲ್ಲಿ ನೀಡಬೇಕಾದ 32 ಟಿಎಂಸಿ ನೀರನ್ನೂ ಕರ್ನಾಟಕ ನೀಡಲು ನಿರಾಕರಿಸುತ್ತಿದೆ. ಇತ್ತೀಚೆಗೆ ಆಡಳಿತ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿರುವ ಕರ್ನಾಟಕದಿಂದ, ತಮಿಳುನಾಡಿಗೆ ಬರಬೇಕಾದ ನೀರನ್ನು ಮುಖ್ಯಮಂತ್ರಿ ಪಡೆದುಕೊಳ್ಳಬೇಕು ಎಂದವರು ಆಗ್ರಹಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:14 pm, Thu, 9 July 26

Source link

Leave a Reply

Your email address will not be published. Required fields are marked *