‘ರಾಕಿಂಗ್ ಸ್ಟಾರ್’ ಯಶ್ (Yash) ನಟನೆಯ, ಗೀತು ಮೋಹನ್ದಾಸ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic) ಬಿಡುಗಡೆಗೆ ಸಜ್ಜಾಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಒಂದಲ್ಲಾ ಒಂದು ಕಾರಣಕ್ಕೆ ‘ಟಾಕ್ಸಿಕ್’ ಚಿತ್ರ ಸುದ್ದಿ ಆಗುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೌತ್ ಸಿನಿರಂಗದ ಲೇಡಿ ಸೂಪರ್ಸ್ಟಾರ್ ನಯನತಾರಾ (Nayanthara) ಅವರ ಸಂಭಾವನೆ ಬಗ್ಗೆ ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ. ಈ ಚಿತ್ರದಲ್ಲಿ ನಟಿಸಲು ನಯನತಾರಾ ಅವರಿಗೆ ಕೈತುಂಬ ಸಂಭಾವನೆ ನೀಡಲಾಗಿದೆ.
ಲೇಟೆಸ್ಟ್ ಮಾಹಿತಿಯ ಪ್ರಕಾರ, ನಯನತಾರಾ ಅವರು ‘ಟಾಕ್ಸಿಕ್’ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದು ಅವರ ಸುದೀರ್ಘ ಸಿನಿ ಕೆರಿಯರ್ನಲ್ಲೇ ಅತ್ಯಂತ ದೊಡ್ಡ ಮೊತ್ತದ ಪೇ-ಚೆಕ್ಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಕೂಡ ನಯನತಾರಾ ಅವರಿಗೆ ಜನಪ್ರಿಯತೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಇಷ್ಟು ಸಂಭಾವನೆ ಸಿಕ್ಕಿದೆ.
15 ಕೋಟಿ ಡಿಮ್ಯಾಂಡ್ ಮಾಡಿದ್ದ ನಯನತಾರಾ:
ವರದಿಗಳ ಪ್ರಕಾರ, ನಯನತಾರಾ ಅವರು ಆರಂಭದಲ್ಲಿ ಈ ಪ್ರಾಜೆಕ್ಟ್ಗೆ ಸಹಿ ಹಾಕಲು ಬರೋಬ್ಬರಿ 15 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ. ಆದರೆ ಚಿತ್ರದ ನಿರ್ಮಾಪಕರು ಹಾಗೂ ನಟಿಯ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳ ನಂತರ, ಕೊನೆಗೆ 12 ಕೋಟಿ ರೂಪಾಯಿಗೆ ಡೀಲ್ ಫೈನಲ್ ಆಯಿತು ಎಂದು ಹೇಳಲಾಗುತ್ತಿದೆ.
ಕಡಿಮೆ ಸ್ಕ್ರೀನ್ ಟೈಮ್ ಇದ್ದರೂ ಭಾರಿ ಮೊತ್ತ:
ಇಲ್ಲಿ ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ, ‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಅವರ ಪಾತ್ರಕ್ಕೆ ಅತಿ ಹೆಚ್ಚು ಸ್ಕ್ರೀನ್ ಟೈಮ್ ಇಲ್ಲವಂತೆ. ಚಿತ್ರದಲ್ಲಿ ಅವರದ್ದು ಪ್ರಮುಖ ಪಾತ್ರವಾದರೂ ಅದು ಅತಿ ದೀರ್ಘವಾಗಿ ಇರುವುದಿಲ್ಲ ಎನ್ನಲಾಗಿದೆ. ಆದಾಗ್ಯೂ, ಅವರ ಸ್ಟಾರ್ ವ್ಯಾಲ್ಯೂ ಮತ್ತು ಕಥೆಗೆ ಇರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಚಿತ್ರತಂಡ ಅವರಿಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಲು ಒಪ್ಪಿಕೊಂಡಿದೆ ಹೇಳಲಾಗುತ್ತಿದೆ.
ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ವಿರುದ್ಧ ಸೆಣೆಸಲು ವಿವಾದ ಬಗೆಹರಿಸಿಕೊಂಡ ಶ್ರದ್ಧಾ ಕಪೂರ್
‘ಕೆವಿಎನ್ ಪ್ರೊಡಕ್ಷನ್ಸ್’ ಅದ್ದೂರಿ ಸಿನಿಮಾ:
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಅದ್ದೂರಿಯಾಗಿ ನಿರ್ಮಿಸಿರುವ ‘ಟಾಕ್ಸಿಕ್’ ಚಿತ್ರದ ಮೇಲೆ ಸದ್ಯ ಇಡೀ ದೇಶದ ಸಿನಿರಂಗ ಕಣ್ಣಿಟ್ಟಿದೆ. ಇತ್ತೀಚೆಗೆ ಈ ಸಿನಿಮಾದಿಂದ ‘ತಬಾಹಿ..’ ವಿಡಿಯೋ ಸಾಂಗ್ ಬಿಡುಗಡೆ ಆಯಿತು. ಆ ಹಾಡಿನಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಕಿಯಾರಾ ಅವರಿಗೆ ಈ ಸಿನಿಮಾದಲ್ಲಿ ನಟಿಸಲು 15 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.