ಕಾವೇರಿ ಜಲ ವಿವಾದ: ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ; ಜುಲೈ 22ರಂದು CWMA ಮೀಟಿಂಗ್​ – Kannada News | Cauvery Water Row: DMK Strongly Opposes Mekedatu Project in Lok Sabha; Crucial CWMA Meeting Scheduled for July 22

ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ

ದೆಹಲಿ, ಜುಲೈ 20: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕದ ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿದೆ. ಮೇಕೆದಾಟು ವಿಚಾರವಾಗಿ ನಿಲುವಳಿ ಸೂಚನೆಗೆ ಅವಕಾಶ ಡಿಎಂಕೆ ಕೋರಿದ್ದು, ತಕ್ಷಣವೇ ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ. ಡಿಎಂಕೆ ಸಂಸದೀಯ ಮಂಡಳಿ ನಾಯಕ ಟಿ.ಆರ್.ಬಾಲು ಈ ಬಗ್ಗೆ ಒತ್ತಾಯಿಸಿದ್ದು, ಪ್ರಸ್ತಾವನೆಗೆ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದ ಕಾರಣ ಲೋಕಸಭೆ ಸದನದ ಬಾವಿಗಿಳಿದು ಡಿಎಂಕೆ‌ ಸಂಸದರು ಪ್ರತಿಭಟನೆ ನಡೆಸಿದ್ದಾರೆ.

ಜುಲೈ 22ರಂದು ದೆಹಲಿಯಲ್ಲಿ CWMA ಮೀಟಿಂಗ್​

ಬರದ ನಡುವೆಯೂ ನೀರು ಬಿಡುವಂತೆ ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಪಟ್ಟು ಹಿನ್ನೆಲೆ ಬುಧವಾರ ದೆಹಲಿಯಲ್ಲಿ ಉನ್ನತ ಮಟ್ಟದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಿಗದಿಯಾಗಿದೆ. ಕಳೆದ ವಾರವಷ್ಟೇ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆದಿತ್ತು. ಆದರೆ ಈ ವೇಳೆ ಕರ್ನಾಟಕಕ್ಕೆ ನೀರು ಹರಿಸುವ ಬಗ್ಗೆ ಯಾವುದೇ ಸೂಚನೆಯನ್ನು CWRC ನೀಡಿರಲಿಲ್ಲ. ಹೀಗಾಗಿ CWRC ನಿರ್ಧಾರಕ್ಕೆ ತಮಿಳುನಾಡು ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರ CWMA ಸಭೆ ಕರೆಯುವಂತೆ ಮನವಿ ಮಾಡಿತ್ತು. ಹೀಗಾಗಿ ಜುಲೈ 22ರಂದು ದೆಹಲಿಯಲ್ಲಿ CWMA ಮೀಟಿಂಗ್​ ನಡೆಯಲಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಿಡಬ್ಲ್ಯುಆರ್​ಸಿಗಿಂತ ಉನ್ನತ ಅಧಿಕಾರವನ್ನು CWMA ಹೊಂದಿದೆ ಎನ್ನುವುದಿಲ್ಲಿ ಗಮನಾರ್ಹ.

ಇದನ್ನೂ ಓದಿ: ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡು ಪಟ್ಟು; ಸಾಧ್ಯವೇ ಇಲ್ಲ ಎಂದ ಕರ್ನಾಟಕ

CWRC ಸಭೆಯಲ್ಲಿ ಕರ್ನಾಟಕದ ವಾದ ಏನಾಗಿತ್ತು?

ಕೆಆರ್​ಎಸ್​ನಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲವೆಂದು CWRC ಸಭೆಯಲ್ಲಿ ಕರ್ನಾಟಕ ವಾದಿಸಿತ್ತು. ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ಆಗಿದೆ. ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಶೂನ್ಯ ಒಳಹರಿವಿದ್ದು, ಜುಲೈ ತಿಂಗಳಲ್ಲಿ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಬರಿದಾದ ಡ್ಯಾಂಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಈ ನಡುವೆ ಮಾನ್ಸೂನ್ ಮತ್ತೆ ಚುರುಕು ಪಡೆಯುವ ಯಾವ ಮುನ್ಸೂಚನೆ ಇಲ್ಲ. ಹೀಗಾಗಿ ಸದ್ಯ ಸಂಗ್ರಹವಿರುವ ನೀರನ್ನು ಮುಂದಿನ ಮಾನ್ಸೂನ್​ವರೆಗೂ ಕುಡಿಯಲು ಬಳಸಿಕೊಳ್ಳಬೇಕು. ಕರ್ನಾಟಕದಲ್ಲಿ ರೈತರು ಕೃಷಿಗೆ ನೀರು ಕೇಳುತ್ತಿದ್ದಾರೆ, ಆದರೆ ನಾವು ಬಿಡುತ್ತಿಲ್ಲ. ರಾಜ್ಯದಲ್ಲಿ ಸಂಪೂರ್ಣ ಬರ ಆವರಿಸಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ನಮಗೆ ಇಲ್ಲಿ ಕುಡಿಯಲೂ ನೀರಿಲ್ಲ ಎಂದು ಕರ್ನಾಟಕ ತಿಳಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *