Headlines

‘ಕಾವೇರಿ ನಮ್ಮ ಜನರನ್ನು ಬೆಸೆಯಲಿ, ವಿಭಜಿಸದಿರಲಿ’: ತಮಿಳುನಾಡು ಸಿಎಂ ವಿಜಯ್‌ಗೆ ಪತ್ರ ಬರೆದ ಬಿ.ವೈ. ವಿಜಯೇಂದ್ರ – Kannada News | BY Vijayendra Writes to Tamil Nadu CM Vijay Over Cauvery River Issue

ಬೆಂಗಳೂರು, ಆಗಸ್ಟ್ 02: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಮಹತ್ವದ ಪತ್ರ ಬರೆದಿದ್ದಾರೆ. “ಕಾವೇರಿ ನದಿ ಉಭಯ ರಾಜ್ಯಗಳ ಜನರನ್ನು ಬೆಸೆಯುವ ಕೊಂಡಿಯಾಗಬೇಕೇ ವಿನಃ ವಿಭಜಿಸುವ ಶಕ್ತಿಯಾಗಬಾರದು” ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸೌಹಾರ್ದಯುತ ಮಾತುಕತೆಗೆ ವಿಜಯೇಂದ್ರ ಕರೆ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದ ಬೆನ್ನಲ್ಲೇ ಎರಡೂ ರಾಜ್ಯಗಳ ನಡುವೆ ರಾಜಕೀಯ ಮತ್ತು ಕಾನೂನು ಸಮರ ತೀವ್ರಗೊಂಡಿದೆ. ಈ ವಾತಾವರಣದ ನಡುವೆ ವಿಜಯೇಂದ್ರ ಅವರು ತಮಿಳುನಾಡು ಸಿಎಂಗೆ ರಾಜತಾಂತ್ರಿಕ ಹಾಗೂ ಸೌಹಾರ್ದಯುತ ಹಾದಿ ತುಳಿಯುವಂತೆ ಮನವಿ ಮಾಡಿದ್ದಾರೆ.

“ನೆರೆಹೊರೆಯ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅವುಗಳನ್ನು ರಾಜಕೀಯ ಪಕ್ವತೆ ಮತ್ತು ಮುಕ್ತ ಸಂವಾದದ ಮೂಲಕ ಬಗೆಹರಿಸಿಕೊಳ್ಳುವುದು ಮುಖ್ಯ” ಎಂದು ವಿಜಯೇಂದ್ರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಿಂದೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಹಾಗೂ ತಮಿಳುನಾಡಿನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಎಂ. ಕರುಣಾನಿಧಿ ಅವರು ತೋರಿಸಿದ ರಾಜಕೀಯ ಪಕ್ವತೆಯನ್ನು ವಿಜಯೇಂದ್ರ ನೆನಪಿಸಿದ್ದಾರೆ.

ಮೇಕೆದಾಟು ಯೋಜನೆಗೆ ಬೆಂಬಲ ನೀಡಲು ಮನವಿ

ಬೆಂಗಳೂರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಕೋಟ್ಯಂತರ ಕನ್ನಡಿಗರು ಮತ್ತು ತಮಿಳರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಮೇಕೆದಾಟು ಯೋಜನೆ ಅತ್ಯಗತ್ಯ ಎಂದು ವಿಜಯೇಂದ್ರ ಪ್ರತಿಪಾದಿಸಿದ್ದಾರೆ. ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣದಿಂದ ತಮಿಳುನಾಡಿಗೆ ಸಿಗಬೇಕಾದ ನ್ಯಾಯಯುತ ನೀರಿನ ಪಾಲಿಗೆ ಯಾವುದೇ ಧಕ್ಕೆಯಾಗುವುದಿಲ್ಲ.

“ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈ ಯೋಜನೆ ನೆರವಾಗಲಿದ್ದು, ಇದಕ್ಕೆ ತಮಿಳುನಾಡು ಸರ್ಕಾರ ಬೆಂಬಲ ನೀಡಿದರೆ ಅದು ಎರಡೂ ರಾಜ್ಯಗಳ ನಡುವಿನ ಸಹಕಾರಕ್ಕೆ ದೊಡ್ಡ ಸಂಕೇತವಾಗಲಿದೆ” ಎಂದು ವಿಜಯೇಂದ್ರ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಕೃತಿಯ ವಿಕೋಪ ಹಾಗೂ ಮುಂಗಾರು ಅಭಾವದಿಂದಾಗಿ ಎರಡೂ ರಾಜ್ಯಗಳ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಂತದಲ್ಲಿ ತಮಿಳುನಾಡು ಸಿಎಂ ವಿಜಯ್ ಅವರು ಕರ್ನಾಟಕದ ಹಿತಾಸಕ್ತಿಯನ್ನು ಗೌರವಿಸುತ್ತಲೇ ತಮಿಳುನಾಡಿನ ಹಿತ ಕಾಯುವ ಪಕ್ವ ನಿಲುವು ತಳೆಯಬೇಕು ಎಂದು ವಿಜಯೇಂದ್ರ ಆಶಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *