ಇತ್ತೀಚೆಗೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಪೂರೈಕೆಯಾಗಿದ್ದ ಕಲುಷಿತ ನೀರುImage Credit source: tv9
ಬೆಂಗಳೂರು, ಜುಲೈ 30: ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರು ಕಲುಷಿತಗೊಂಡ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಕತ್ರಿಗುಪ್ಪೆ ಮತ್ತು ಯಲಹಂಕದ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರಿನಲ್ಲಿ ಕೊಳಚೆ ನೀರು ಸೇರಿಕೊಂಡು ಜನರು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಇಂತಹ ಸಮಸ್ಯೆಗಳಿಗೆಲ್ಲ ಬ್ರೇಕ್ ಹಾಕಲು ಬೆಂಗಳೂರು ಜಲ ಮಂಡಳಿ (BWSSB) ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ನಗರದ ನೀರು ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಹೊಸ ತಂತ್ರಜ್ಞಾನ ಪ್ರಯೋಗಕ್ಕೆ ಮುಂದಾಗಿದೆ. ನೀರಿನ ಪೈಪ್‌ಲೈನ್‌ಗಳ ಸೋರಿಕೆ, ಹಾನಿ ಹಾಗೂ ನೀರು ಕಲುಷಿತಗೊಳ್ಳುವ ಸಾಧ್ಯತೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ತಂತ್ರಜ್ಞಾನವನ್ನು ಬಳಸುವ ಪ್ರಾಯೋಗಿಕ ಯೋಜನೆ ಆರಂಭವಾಗಲಿದೆ.
18 ತಿಂಗಳ ಈ ಪ್ರಾಯೋಗಿಕ ಯೋಜನೆಯನ್ನು ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಅಂಡರ್ಗ್ರೌಂಡ್ ನೀರು ಪೂರೈಕೆ ಪೈಪ್‌ಲೈನ್‌ಗಳನ್ನು ಪರಿಶೀಲಿಸಲು ಸುಧಾರಿತ ರೋಬೋಟಿಕ್ ಉಪಕರಣಗಳನ್ನು ಬಳಸಲಾಗುತ್ತದೆ.
ಹೇಗೆ ಕೆಲಸ ಮಾಡಲಿದೆ ರೋಬೋಟಿಕ್ ತಂತ್ರಜ್ಞಾನ?
ಪೈಪ್‌ಲೈನ್‌ನಲ್ಲಿ ಸೋರಿಕೆ, ಹಾನಿ ಅಥವಾ ನೀರು ಕಲುಷಿತಗೊಂಡಿರುವುದನ್ನು ರೋಬೋಟಿಕ್ ತಂತ್ರಜ್ಞಾನ ಪತ್ತೆಹಚ್ಚಲಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಂತ್ರಜ್ಞಾನದ ಮೂಲಕ ಎಚ್ಚರಿಕೆ ರವಾನಿಸಲಿದೆ. ಇದರಿಂದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ನೀರು ಪೋಲಾಗುವುದು ಹಾಗೂ ಆದಾಯದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಹೊಸ ಕ್ರಮದ ಬಗ್ಗೆ ಜಲಮಂಡಳಿ ಹೇಳುವುದೇನು?
ಹೊಸ ತಂತ್ರಜ್ಞಾನದಿಂದ ನೀರು ಸೋರಿಕೆ, ಪೈಪ್‌ಲೈನ್ ದೋಷ, ನೀರಿನ ಕಲುಷಿತಗೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷೆ ಮಂಜುಳಾ ಎನ್. ಹೇಳಿದ್ದಾರೆ.
ಇದನ್ನೂ ಓದಿ: ಕಾವೇರಿ ನದಿಗೆ ಸೇರ್ತಿದೆ ಮೈಸೂರಿನ ಕೊಳಚೆ ನೀರು; ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜೀವನದಿ ಕಲುಷಿತ
ಈ ಯೋಜನೆಯನ್ನು ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಟೈಟಾನ್ ಕಂಪನಿ ಲಿಮಿಟೆಡ್ನ ‘Design Impact Award’ ಅನುದಾನ ಕಾರ್ಯಕ್ರಮದಡಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಇದಕ್ಕಾಗಿ ಜಲಮಂಡಳಿ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಮಂಡಳಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
