ಮೈಸೂರು, ಆಗಸ್ಟ್ 1: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವಿವಾದ (Cauvery Water Dispute) ಮುಂದುವರಿದಿರುವ ನಡುವೆಯೇ, ಮೈಸೂರು (Mysuru) ಭಾಗದಿಂದ ಕೊಂಚ ನೆಮ್ಮದಿಯ ಸುದ್ದಿಯೊಂದು ಬಂದಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಏಕಾಏಕಿ ಹೆಚ್ಚಾಗಿದೆ. ಸದ್ಯ ಕಬಿನಿ ಜಲಾಶಯ (Kabini Dam) ಭರ್ತಿಯಾಗುವ ಹಂತ ತಲುಪಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಕಾವೇರಿ ನೀರಾವರಿ ನಿಗಮದ ಮಾಹಿತಿ ಪ್ರಕಾರ, ಆಗಸ್ಟ್ 1ರಂದು ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಜಲಾಶಯ ಭರ್ತಿಯಾಗುವ ಹಂತದಲ್ಲಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಜಲಾಶಯದ ಸುರಕ್ಷತೆ ಹಾಗೂ ಕೆಳಭಾಗದ ಜನರ ಹಿತದೃಷ್ಟಿಯಿಂದ 8,000ರಿಂದ 10,000 ಕ್ಯೂಸೆಕ್‌ವರೆಗೆ ನೀರನ್ನು ಹೊರಬಿಡುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ. ಈ ಪ್ರಮಾಣ ಯಾವುದೇ ಕ್ಷಣದಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇರುವುದರಿಂದ ಕಬಿನಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಕಾವೇರಿ ವಿವಾದದ ನಡುವೆಯೇ ಕಬಿನಿಯಿಂದ ನೆಮ್ಮದಿಯ ಸುದ್ದಿ
ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಹಲವು ಜಲಾಶಯಗಳಲ್ಲಿ ನೀರಿನ ಲಭ್ಯತೆ ಕುರಿತು ಆತಂಕ ಎದುರಾಗಿತ್ತು. ಇದೇ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಸಂಬಂಧಿತ ಪ್ರಾಧಿಕಾರಗಳ ಸೂಚನೆಗಳು ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.
ಇದೀಗ ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವುದು ಹಾಗೂ ಒಳಹರಿವು ಏರಿಕೆಯಾಗಿರುವುದು ಕಾವೇರಿ ಕೊಳ್ಳದ ಪಾಲಿಗೆ ತುಸು ಸಮಾಧಾನ ತಂದಿದೆ. ಆದರೆ, ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಮತ್ತು ಹೊರಹರಿವಿನ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ಗಮನಿಸಬೇಕಿದೆ.
ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ
ಕಬಿನಿ ಜಲಾಶಯದಿಂದ ನೀರು ಹೊರಬಿಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಬಿನಿ ನದಿ ಪಾತ್ರದಲ್ಲಿ ಹಾಗೂ ನದಿಯ ಎರಡೂ ದಂಡೆಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸುವಂತೆ ಕಾವೇರಿ ನೀರಾವರಿ ನಿಗಮ ಮನವಿ ಮಾಡಿದೆ.
ಇದನ್ನೂ ಓದಿ: ಹೇಮಾವತಿಗೆ 11 ಟಿಎಂಸಿ ನೀರು ಸೇರ್ಪಡೆ, ಆಲಮಟ್ಟಿ, ತುಂಗಾ ಜಲಾಶಯಗಳು ಭರ್ತಿ!
ಜನರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿ ಬಿಗಡಾಯಿಸಿದರೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
