ಕಾವೇರಿ ವಿವಾದ: ಇಂದು ಕರ್ನಾಟಕ ಬಂದ್​​; ಬೆಂಗಳೂರಲ್ಲಿ ಪೊಲೀಸರಿಂದ ಹೈ ಅಲರ್ಟ್​​ – Kannada News | Cauvery Water Dispute: Karnataka Bandh Called Today; Bengaluru Police on High Alert Across Key Areas

ಬೆಂಗಳೂರು, ಆಗಸ್ಟ್​​ 13: ಕಾವೇರಿ ಜಲ ವಿವಾದ ಸಂಬಂಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್​​ಗೆ ಕರೆ ನೀಡಲಾಗಿದ್ದು, ಬಂದ್​​ ಬಹುತೇಕ ಪ್ರತಿಭಟನೆಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ. ವಾಟಾಳ್ ನಾಗರಾಜ್ ನೇತೃತ್ವದ ‘ಕನ್ನಡ ಸಂಘಟನೆಗಳ ಒಕ್ಕೂಟ’, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿರುವ ಕಾರಣ ರಾಜ್ಯಾದ್ಯಂತ ಬಹುತೇಕ ಸೇವೆಗಳು ಎಂದಿನಂತೆ ಇರಲಿವೆ. ಬೆಳಿಗ್ಗೆಯಿಂದ ಬೆಂಗಳೂರಿನ ಮಡಿವಾಳ, ಶಾಂತಿನಗರ ಸೇರಿ ವಿವಿಧೆಡೆ ಬಿಎಂಟಿಸಿ ಮತ್ತು ಖಾಸಗಿ ಬಸ್​​ಗಳ ಸಂಚಾರವೂ ಎಂದಿನಂತೆ ಆರಂಭವಾಗಿದೆ.

ಸಾರ್ವಜನಿಕರಿಗೆ ತೊಂದರೆ ನೀಡದಂತೆ ಪೊಲೀಸರ ಸೂಚನೆ

ಕರ್ನಾಟಕ ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಮುಖ್ಯವಾಗಿ ನಗರದ ಕೇಂದ್ರ ವಿಭಾಗ, ಪಶ್ಚಿಮ ವಿಭಾಗ, ವಾಯವ್ಯ ವಿಭಾಗ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ತಮಿಳು ಭಾಷಿಕರ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಲು ನಗರ ವ್ಯಾಪ್ತಿಯ ಎಲ್ಲಾ ಡಿಸಿಪಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸೂಚನೆ ನೀಡಿದ್ದಾರೆ. ಅಲ್ಲದೆ ಬಂದ್​​ ಹೆಸರಲ್ಲಿ ಸರ್ಕಾರಿ ಬಸ್, ಇತರೆ​ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಬಾರದು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು. ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟು ಬಂದ್​ ಮಾಡಿಸಬಾರದು. ಒಂದೊಮ್ಮೆ ಆ ರೀತಿ ನಡೆದುಕೊಂಡಲ್ಲಿ ಕ್ರಮದ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ. ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಹೊರಗೆ ಧರಣಿ, ರ್ಯಾಲಿ ನಡೆಸಿದರೆ ವಶಕ್ಕೆ ಪಡೆಯಲು ಪೊಲೀಸ್​ ಸಿಬ್ಬಂದಿಗೆ ಕಮಿಷನರ್ ಸೂಚಿಸಿದ್ದಾರೆ.

ಇದನ್ನೂ ಓದಿ: ಆ.13ರಂದು ಕರ್ನಾಟಕ ಬಂದ್​​​ಗೆ ಯಾರ್ಯಾರ ಬೆಂಬಲ? ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ

ಹೇಗಿರಲಿದೆ ಇಂದಿನ ಹೋರಾಟ?

ಇನ್ನು ಬಂದ್​​ಗೆ ಕರೆ ನೀಡಿರುವ ವಾಟಾಳ್​​ ನಾಗರಾಜ್​​, ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್​​​​ಗೆ ಆಗಮಿಸಲಿದ್ದಾರೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​​ ನಿಲ್ದಾಣಕ್ಕೆ ಬರಲಿರುವ ಹೋರಾಟಗಾರರು ಬಂದ್​​​​​​ಗೆ ಬೆಂಬಲ ನೀಡುವಂತೆ KSRTC, BMTC ಸಿಬ್ಬಂದಿಗೆ ಮನವಿ ಮಾಡಲಿದ್ದಾರೆ. ನಂತರ ಟೌನ್​ಹಾಲ್​ ಬಳಿ ತೆರಳಿ ಅಲ್ಲಿಂದ ಫ್ರೀಡಂಪಾರ್ಕ್​ವರೆಗೆ ಪ್ರತಿಭಟನಾಮೆರವಣಿಗೆಗೆ ನಿರ್ಧರಿಸಲಾಗಿದೆ. ತೆರೆದ ವಾಹನದಲ್ಲಿ ವಾಟಾಳ್​​ ಪ್ರತಿಭಟನಾ ರ್ಯಾಲಿ ನಡೆಸಲಿದ್ದು, ಟೌನ್​ಹಾಲ್​ನಿಂದ ಹಲಸೂರು ಗೇಟ್​​ ಪೊಲೀಸ್ ಠಾಣೆ, ಮೈಸೂರು ಬ್ಯಾಂಕ್ ಸರ್ಕಲ್, ಓಣಿ ಆಂಜನೇಯ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಫ್ರೀಡಂಪಾರ್ಕ್ ತಲುಪಲಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *