ಕಾವೇರಿ ವಿವಾದ: ಕರ್ನಾಟಕಕ್ಕೆ ಬಿಗ್ ಶಾಕ್ (ಸಾಂದರ್ಭಿಕ ಚಿತ್ರ)Image Credit source: tv9
ನವದೆಹಲಿ, ಆಗಸ್ಟ್ 17: ಕಾವೇರಿ ನೀರು ಹಂಚಿಕೆ (Cauvery Dispute) ವಿಚಾರದಲ್ಲಿ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಕರ್ನಾಟಕಕ್ಕೆ ಸೂಚಿಸಿದೆ. ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದರೊಂದಿಗೆ, ಮುಂಗಾರು ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡಿನ ವಾದ ಏನು?
CWMA ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್‌ನಷ್ಟು ನೀರು ಬರುತ್ತಿದ್ದು, ಈವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ಲಭಿಸಿದೆ ಎಂದು ತಮಿಳುನಾಡು ತನ್ನ ವಾದದಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ CWMA ಆದೇಶವನ್ನು ಜಾರಿಗೊಳಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಕರ್ನಾಟಕದ ವಾದವೇನು?
ಕರ್ನಾಟಕದ ಪರವಾಗಿ, ಈಗಾಗಲೇ 3,500 ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ತಿಳಿಸಲಾಗಿದೆ. CWMA ಆದೇಶವನ್ನು ಪಾಲಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ವಾದಿಸಲಾಗಿದೆ. ಬಿಳಿಗುಂಡ್ಲು ಬಳಿ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ. 12 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಅಲ್ಲಿ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕರ್ನಾಟಕದ ಪರ ವಾದ ಮಂಡಿಸಲಾಗಿದೆ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಈ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿಸುವುದು ರಾಜ್ಯಕ್ಕೆ ಕಷ್ಟವಾಗುತ್ತಿದೆ. ಆದರೂ CWMA ಆದೇಶ ಪಾಲಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ತಿಳಿಸಲಾಗಿದೆ.
ಮೇಕೆದಾಟು ಯೋಜನೆ ಪ್ರಸ್ತಾಪ
ಈ ಸಂದರ್ಭದಲ್ಲಿ ಮೇಕೆದಾಟು ಆಣೆಕಟ್ಟು ಯೋಜನೆಯ ಅಗತ್ಯತೆಯನ್ನೂ ಕರ್ನಾಟಕದ ಪರವಾಗಿ ಪ್ರಸ್ತಾಪಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇಂತಹ ಅನಿಶ್ಚಿತ ಪರಿಸ್ಥಿತಿ ಎದುರಾದಾಗ ಮೇಕೆದಾಟು ಯೋಜನೆ ಸಹಕಾರಿಯಾಗಲಿದೆ ಎಂದು ವಾದಿಸಲಾಗಿದೆ. ಆದರೆ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಅಂಶವನ್ನೂ ಕರ್ನಾಟಕದ ಪರವಾಗಿ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಇದನ್ನೂ ಓದಿ: ಕಾವೇರಿ ನೀರು ವಿವಾದ: CWRC ಶಿಫಾರಸ್ಸು ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಬರೆ
ಅಂತಿಮವಾಗಿ, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದ್ದು, ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವ ನಿರ್ದೇಶನ ಮುಂದುವರಿದಿದೆ. ಪ್ರಕರಣದ ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
