ನವದೆಹಲಿ, ಫೆಬ್ರುವರಿ 26: ಸ್ವಿಟ್ಜರ್ಲ್ಯಾಂಡ್ನ ಜಿನಿವಾದಲ್ಲಿ ನಡೆಯುತ್ತಿರುವ 61ನೇ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ (UNHRC) ಮಾನವ ಹಕ್ಕು ವಿಚಾರ ಕೆದಗಿದ ಪಾಕಿಸ್ತಾನಕ್ಕೆ ಭಾರತ ಝಾಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜನರ ಮೇಲೆ ಭಾರತ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎನ್ನುವ ಪಾಕಿಸ್ತಾನದ ಆರೋಪಗಳಿಗೆ ಭಾರತ ತಿರುಗೇಟು ಕೊಟ್ಟಿದೆ. ಆರ್ಥಿಕ ಕುಸಿತ ಹೊಂದಿರುವ ಪಾಕಿಸ್ತಾನವು, ಅಭಿವೃದ್ಧಿ ಹೊಂದುತ್ತಿರುವ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುವ ದಾರ್ಷ್ಟ್ಯತನ ತೋರಿದೆ ಎಂದು ಭಾರತ ಕಿಡಿಕಾರಿದೆ.
ಪಾಕಿಸ್ತಾನ ಐಎಂಎಫ್ನಲ್ಲಿ ಕೇಳುತ್ತಿರುವ ಸಾಲದ ಹಣಕ್ಕಿಂತ ಎರಡು ಪಟ್ಟು ಹೆಚ್ಚಿದೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಬಜೆಟ್ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಭಾರತ ಹೇಳಿದೆ. ಈ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಅನುಪಮಾ ಸಿಂಗ್ ಅವರು, ಪಾಕಿಸ್ತಾನದ ಸುಳ್ಳುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?
ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಆರೋಪಗಳಿಗೆ ಬೆಂಬಲ ನೀಡಿದ ಇಸ್ಲಾಮಿಕ್ ಸಹಕಾರ ಸಂಘಟನೆಯನ್ನೂ (ಒಐಸಿ) ಅನುಪಮಾ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಸದಸ್ಯ ದೇಶಕ್ಕಾಗಿ ಈ ಸಂಘಟನೆಯು ಇಕೋ ಚೇಂಬರ್ನಂತೆ ಕೆಲಸ ಮಾಡುತ್ತಿದೆ ಎಂದು ಒಐಸಿಯನ್ನು ಟೀಕಿಸಿದ್ದಾರೆ.
ಅಕ್ರಮವಾಗಿ ವಶಪಡಿಸಿಕೊಂಡಿರುವುದು ಪಾಕಿಸ್ತಾನವೇ
‘ಜಮ್ಮು ಮತ್ತು ಕಾಶ್ಮೀರವು ಹಿಂದೆಯೂ, ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. 1947ರಲ್ಲಿ ಭಾರತದೊಂದಿಗಿನ ಅದರ ಸೇರ್ಪಡೆ ಸಂಪೂರ್ಣ ಕಾನೂನು ಬದ್ಧವಾಗಿಯೇ ಇತ್ತು. ಒಂದೇ ಸಮಸ್ಯೆ ಎಂದರೆ ಭಾರತದ ಭೂಭಾಗಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿರುವುದು’ ಎಂದು ಹೇಳಿರುವ ಅನುಪಮಾ ಸಿಂಗ್ ಅವರು, ಈ ಭೂಭಾಗಗಳನ್ನು ಬಿಟ್ಟುಕೊಡುವಂತೆ ಆಗ್ರಹಿಸಿದ್ದಾರೆ. ಅನುಪಮಾ ಸಿಂಗ್ ಅವರು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಗ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳನ್ನು ಉಲ್ಲೇಖಿಸಿದ್ದರು.
VIDEO | Switzerland: At the High-Level Segment of the 55th Regular Session of the UN Human Rights Council, First Secretary, Anupama Singh in Geneva, says, “India is compelled to exercise its right of reply in response to the references made during the high-level segment by… pic.twitter.com/uHOrmIEf4g
— Press Trust of India (@PTI_News) February 26, 2026
ಕನಸಿನ ಲೋಕದಲ್ಲಿದೆ ಪಾಕಿಸ್ತಾನ
ಕಣಿವೆ ರಾಜ್ಯವು ಅಭಿವೃದ್ಧಿವಂಚಿತವಾಗಿದೆ ಎನ್ನುವ ಪಾಕಿಸ್ತಾನದ ಆರೋಪಕ್ಕೆ ಯುಎನ್ಎಚ್ಆರ್ಸಿ ಸಭೆಯಲ್ಲಿ ಭಾರತ ಕಟುವಾಗಿ ಪ್ರತ್ಯುತ್ತರ ಕೊಟ್ಟಿದೆ. ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎನಿಸಿದ ಚೆನಾಬ್ ರೈಲ್ ಬ್ರಿಡ್ಜ್ನ ಉದ್ಘಾಟನೆಯನ್ನು ಅನುಪಮಾ ಸಿಂಗ್ ಉಲ್ಲೇಖಿಸಿದ್ದಾರೆ. ‘ಚೆನಾಬ್ ರೈಲ್ ಬ್ರಿಡ್ಜ್ ಸುಳ್ಳು ಎನ್ನುವುದಾದರೆ ಪಾಕಿಸ್ತಾನ ಯಾವುದೋ ಭ್ರಮೆಯಲ್ಲಿರಬಹುದು, ಅಥವಾ ಲಾ ಲಾ ಲ್ಯಾಂಡ್ನಲ್ಲಿ (ಕನಸಿನ ಲೋಕ) ವಾಸಿಸುತ್ತಿರಬಹುದು’ ಎಂದು ಸಿಂಗ್ ತಿವಿದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
