ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ (King) ಚಿತ್ರದ ಚಿತ್ರೀಕರಣದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸಮುದ್ರ ತೀರದಲ್ಲಿ ಶಾರುಖ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಅವರು ರೊಮ್ಯಾಂಟಿಕ್ ಹಾಡಿನ ದೃಶ್ಯವೊಂದರಲ್ಲಿ ಭಾಗಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸೋರಿಕೆಯಾದ ವಿಡಿಯೋದಲ್ಲಿ, ದೀಪಿಕಾ ಪಡುಕೋಣೆ ಬಿಳಿ ಬಣ್ಣದ ಸುಂದರವಾದ ಉಡುಪಿನಲ್ಲಿ ಮಿಂಚುತ್ತಿದ್ದರೆ, ಶಾರುಖ್ ಖಾನ್ ಕೂಡ ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡಿದ್ದಾರೆ. ಸೂರ್ಯಾಸ್ತದ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಓಡಿ ಬಂದು ಅಪ್ಪಿಕೊಳ್ಳುವ ಮತ್ತು ಶಾರುಖ್ ಖಾನ್ ಅವರು ತಮ್ಮ ಸಿಗ್ನೇಚರ್ ಸ್ಟೈಲ್ನಲ್ಲಿ ಪೋಸ್ ನೀಡುವ ದೃಶ್ಯ ಈ ವಿಡಿಯೋದಲ್ಲಿ ಇದೆ.
‘ಕಿಂಗ್’ ಚಿತ್ರದ ದೃಶ್ಯಗಳು ಸಾಲು ಸಾಲಾಗಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಸಿದ್ದಾರ್ಥ್ ಆನಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ‘ಎಲ್ಲಾ ಅಭಿಮಾನಿಗಳಲ್ಲಿ ನನ್ನದೊಂದು ವಿನಂತಿ. ದಯವಿಟ್ಟು ಕಿಂಗ್ ಚಿತ್ರದ ಸೆಟ್ನಿಂದ ಸೋರಿಕೆಯಾದ ಯಾವುದೇ ವಿಡಿಯೋ ಅಥವಾ ಫೋಟೋಗಳನ್ನು ಹಂಚಿಕೊಳ್ಳಬೇಡಿ. ನಿಮಗೆ ಅತ್ಯುತ್ತಮ ಸಿನಿಮಾ ಅನುಭವ ನೀಡಲು ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದೆ. ಚಿತ್ರತಂಡ ಅಧಿಕೃತವಾಗಿ ದೃಶ್ಯಗಳನ್ನು ಬಿಡುಗಡೆ ಮಾಡುವವರೆಗೆ ಕಾಯಿರಿ’ ಎಂದು ಮನವಿ ಮಾಡಿದ್ದಾರೆ.
ಈ ಚಿತ್ರದ ಮೂಲಕ ಶಾರುಖ್ ಪುತ್ರಿ ಸುಹಾನಾ ಖಾನ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅರ್ಷದ್ ವಾರ್ಸಿ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಕಿಂಗ್’ ಸಿನಿಮಾ 2026ರ ಡಿಸೆಂಬರ್ 24ರಂದು ಕ್ರಿಸ್ಮಸ್ ಪ್ರಯುಕ್ತ ತೆರೆಕಾಣಲಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಶಾರುಖ್-ದೀಪಿಕಾ ‘ಕಿಂಗ್’ ಚಿತ್ರಕ್ಕೆ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರದ್ದು ಸೂಪರ್ ಹಿಟ್ ಜೋಡಿ. ಈಗಾಗಲೇ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ಪ್ರೆಸ್’ ಮತ್ತು ‘ಪಠಾಣ್’ ಸಿನಿಮಾಗಳ ಮೂಲಕ ಯಶಸ್ಸು ಕಂಡ ಅವರು ಈಗ ‘ಕಿಂಗ್’ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.