ನಟಿಯರು ಕ್ಷುಲ್ಲಕ ಕಾರಣಗಳಿಗೂ ಹೀನಾಯವಾಗಿ ಟ್ರೋಲಿಂಗ್ಗೆ ಗುರಿ ಆಗುತ್ತಾರೆ. ಸಿನಿಮಾ ನಟಿಯರಷ್ಟು ಆನ್ಲೈನ್ ದೌರ್ಜನ್ಯ, ನಿಂದನೆಗೆ ಒಳಗಾಗುವವರು ಮತ್ಯಾರೂ ಇಲ್ಲ. ಭಾರತದಲ್ಲಂತೂ ಈ ಕೆಟ್ಟ ಸಂಸ್ಕೃತಿ ಬಹಳ ಇದೆ. ನಟಿಯರು ಪದೇ ಪದೇ ಸೈಬರ್ ಪೊಲೀಸರಿಗೆ ದೂರು ನೀಡುತ್ತಲೇ ಇರುತ್ತಾರೆ ಆದರೂ ಇದು ಕಡಿಮೆ ಆಗಿಲ್ಲ. ಇದೀಗ ಬಾಲಿವುಡ್ನ ಸ್ಟಾರ್ ನಟಿ ಕಿಯಾರಾ ವಿರುದ್ಧ ಕೆಟ್ಟ ಟ್ರೋಲಿಂಗ್ ಆರಂಭವಾಗಿದೆ. ಅದೂ ‘ಟಾಕ್ಸಿಕ್’ (Toxic) ಸಿನಿಮಾನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಕ್ಕೆ.
ಇತ್ತೀಚೆಗಷ್ಟೆ ನಟಿ ಕಿಯಾರಾ ಅಡ್ವಾಣಿ ಅವರ ಹುಟ್ಟುಹಬ್ಬ ಇತ್ತು. ಹುಟ್ಟುಹಬ್ಬದಂದು, ಕಿಯಾರಾ ಅವರ ಪತಿ ನಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅವರ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ ನೆಟ್ಟಿಗರು ಬಹಳ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಅದರಲ್ಲೂ ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ಹಾಟ್ ಆಗಿ, ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದನ್ನೇ ಇರಿಸಿಕೊಂಡು ಹಲವಾರು ಮಂದಿ ನೀಚವಾಗಿ ಕಮೆಂಟುಗಳನ್ನು ಮಾಡಿದ್ದರು. ಕೆಲವರು ಹುಸಿ ಸಂಸ್ಕೃತಿ, ನೈತಿಕತೆಯ ಪಾಠ ಮಾಡಿದ್ದರು.
ಕಿಯಾರಾ ಅಡ್ವಾಣಿ ಆಗಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಈಗ ‘ಟಾಕ್ಸಿಕ್’ ಸಿನಿಮಾನಲ್ಲಿ ಕಿಯಾರಾ ಜೊತೆಗೆ ನಟಿಸಿರುವ ಹುಮಾ ಖುರೇಷಿ ಕಿಯಾರಾ ಪರವಾಗಿ ದನಿ ಎತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಹುಮಾ ಖುರೇಷಿ, ಸಿನಿಮಾ ಬಿಡುಗಡೆಯಾದ ಬಳಿಕ ಈ ಚಿತ್ರದೊಂದಿಗೆ ಗುರುತಿಸಿಕೊಂಡಿರುವ ಮಹಿಳೆಯರೇ ಕೊನೆಗೆ ನಗಲಿದ್ದಾರೆ ಎಂದು ಹೇಳುವ ಮೂಲಕ ಈ ಸಿನಿಮಾ ಟೀಕಾಕಾರರ ಬಾಯಿ ಮುಚ್ಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್ ರಿಲೀಸ್; ಅಧಿಕೃತ ಘೋಷಣೆ ಮಾಡಿದ ಯಶ್
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹುಮಾ ಭಾಗಿ ಆಗಿದ್ದರು, ಈ ವೇಳೆ ‘ಕಿಯಾರಾ ಮತ್ತು ಯಶ್ ಇಬ್ಬರೂ ಮದುವೆಯಾಗಿದ್ದರೂ ಸಹ ‘ತಬಾಹಿ’ ಹಾಡಿನಲ್ಲಿ ಕಿಯಾರಾ ಮಾತ್ರ ಹೆಚ್ಚು ಟೀಕೆಗಳನ್ನು ಎದುರಿಸಿದ್ದೇಕೆ ಎಂದು ಸಂದರ್ಶಕ ಹುಮಾ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಹುಮಾ, ‘ಇದು ಕಲ್ಮಶ ಹಾಗೂ ಅಸಹ್ಯಕರ ಯೋಚನೆ. ಆದರೆ ಈ ಸಿನಿಮಾದಲ್ಲಿರುವ ಮಹಿಳೆಯರು, ನಟಿಯರು ಮತ್ತು ನಿರ್ದೇಶಕರು ಅಂತಿಮವಾಗಿ ಯಶಸ್ಸಿನ ನಗು ನಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಯಾವುದೋ ಮಾತಿನ ಮೂಲಕ ಜನರ ಕೆಟ್ಟ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ, ಯಾವುದನ್ನೂ ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆದರೆ ನಾವು ಮಾಡಿರುವ ಸಿನಿಮಾ ಮಾತನಾಡಲಿದೆ’ ಎಂದಿದ್ದಾರೆ.
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ‘ತಬಾಹಿ’ ಬಿಡುಗಡೆ ಆದಾಗಿನಿಂದ, ಕಿಯಾರಾ ಅಡ್ವಾಣಿ ಅವರು ತೀವ್ರ ಟೀಕೆಗಳು ಮತ್ತು ಕಟು ಕಾಮೆಂಟ್‌ಗಳನ್ನು ಎದುರಿಸುತ್ತಿದ್ದಾರೆ. ಆದರೆ ಅದೇ ಹಾಡಿನಲ್ಲಿ ಅಷ್ಟೇ ಹಾಟ್ ಆಗಿ ನಟಿಸಿರುವ ಯಶ್ ಅವರ ಬಗ್ಗೆ ಯಾರೂ ಮಾತನಾಡಲಿಲ್ಲ. ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ನಯನತಾರಾ ಅವರುಗಳು ನಟಿಸಿದ್ದಾರೆ. ಸಿನಿಮಾ ಇದೇ ತಿಂಗಳು 26ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
