ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ ಅವರು (Sanchita Ugale) ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೇವಲ 22ನೇ ವಯಸ್ಸಿಗೆ ನಟಿ ಇಂತಹ ಕಠಿಣ ಹೆಜ್ಜೆ ಇಟ್ಟು ಕೊನೆಯುಸಿರೆಳೆದಿರುವುದು ಇಡೀ ಚಿತ್ರರಂಗ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಭಾನುವಾರ ಸಂಜೆ ಈ ದುರಂತ ಸಂಭವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸದ್ಯ ನಟಿಯ ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂಚಿತಾ ಅವರ ಹಠಾತ್ ನಿಧನದ ಬೆನ್ನಲ್ಲೇ ಉದ್ಯಮದಲ್ಲಿ ಹಲವು ವದಂತಿಗಳು ಕೇಳಿಬರುತ್ತಿದ್ದು, ಅವರು ತಮ್ಮ ಸಹನಟ ಉಜ್ವಲ್ ಶರ್ಮಾ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು ಎಂಬ ಚರ್ಚೆಗಳು ನಡಯುತ್ತಿದ್ದವು. ಆದರೆ, ಈ ಹಿಂದೆ ಸ್ವತಃ ಸಂಚಿತಾ ಅವರೇ ಇದೆಲ್ಲವೂ ಕೇವಲ ವದಂತಿಗಳಷ್ಟೇ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಸಂಚಿತಾ ಸಾವಿನ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟ ಉಜ್ವಲ್ ಶರ್ಮಾ, ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
‘ನಮ್ಮ ನಡುವೆ ಯಾವುದೇ ಪ್ರೇಮ ಸಂಬಂಧ ಇರಲಿಲ್ಲ, ಅದೆಲ್ಲವೂ ಕೇವಲ ವದಂತಿಗಳಾಗಿದ್ದವು’ ಎಂದು ಉಜ್ವಲ್ ಸ್ಪಷ್ಟನೆ ನೀಡಿದ್ದಾರೆ. ‘ಸಂಚಿತಾ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಆತನ ಜೊತೆಯೇ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆತನ ನಡವಳಿಕೆಯಿಂದಾಗಿ ಸಂಚಿತಾ ಮಾನಸಿಕವಾಗಿ ತೀವ್ರ ಕಷ್ಟದ ಸಮಯವನ್ನು ಎದುರಿಸುತ್ತಿದ್ದರು. ನಾನು ನನ್ನ ಊರಿಗೆ ತೆರಳಿದ್ದರಿಂದ ಕಳೆದ ಕೆಲವು ದಿನಗಳಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ’ ಎಂದು ಉಜ್ವಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ
ಕೊನೆಯ ದಿನಗಳಲ್ಲಿ ಸಂಚಿತಾ ಅನುಭವಿಸುತ್ತಿದ್ದ ಮಾನಸಿಕ ಒತ್ತಡವನ್ನು ಕಂಡು ಅನೇಕರು ಅವರಿಗೆ ನೆರವಾಗಿದ್ದರು. ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಂಬಂಧಪಟ್ಟ ಪ್ರೊಡಕ್ಷನ್ ಹೌಸ್ ಕೂಡ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿತ್ತು. ಏನೇ ನಡೆದಿದ್ದರೂ ಇದು ಅತ್ಯಂತ ದುಃಖಕರ ಮತ್ತು ಆಘಾತಕಾರಿ ಸಂಗತಿಯಾಗಿದ್ದು, ಅವರ ಸಾವಿನ ಸುದ್ದಿ ಕೇಳಿ ತಮಗೆ ತೀವ್ರ ಆಘಾತವಾಗಿದೆ ಎಂದು ಉಜ್ವಲ್ ಶರ್ಮಾ ಹೇಳಿದ್ದಾರೆ. ಸದ್ಯ ಪೊಲೀಸರು ಸಂಚಿತಾ ಅವರ ವೈಯಕ್ತಿಕ ಜೀವನ ಹಾಗೂ ಅವರ ಮಾಜಿ ಗೆಳೆಯನ ಹಿನ್ನೆಲೆಯನ್ನು ಆಧರಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:07 am, Tue, 16 June 26
