
ಮೈಸೂರು, ಏಪ್ರಿಲ್ 10: ಸಮಾಜದಲ್ಲಿ ವಿಶೇಷ ಚೇತನರಿಗೆ (Specially Abled) ಸೌಲಭ್ಯಗಳ ಜೊತೆ ಗೌರವವನ್ನೂ ನೀಡಲಾಗುತ್ತದೆ. ಎಲ್ಲರಂತಲ್ಲದ ಅವರನ್ನು ಕರುಣೆಯಿಂದಲೇ ನೋಡಲಾಗುತ್ತದೆ. ಅಂಗವೈಕಲ್ಯ ಹೊಂದಿದವರು ಇನ್ನೇನು ಅಪರಾಧ ಮಾಡಲು ಸಾಧ್ಯ ಎಂದು ಯೋಚಿಸುವವರನ್ನು ಬೆಚ್ಚಿಬೀಳಿಸುವ ಘಟನೆ ಜಿಲ್ಲೆಯ ನಂಜನಗೂಡು (Nanjanagudu) ತಾಲೂಕಿನ ದೇವಿರಮ್ಮನಹಳ್ಳಿಯಲ್ಲಿ ನಡೆದಿದೆ. ಮಾನವನ ವಿಕೃತ ಮನೋಭಾವಕ್ಕೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದು ಈ ಪ್ರಕರಣದಲ್ಲಿ ಸಾಭೀತಾಗಿದೆ.
ಸ್ನೇಹಿತನ ಮಡದಿಯನ್ನೇ ಮದುವೆಯಾಗಲು ಬಯಸಿದ್ದ
ಸ್ವಾಮಿ ಮತ್ತು ಆತನ ಪತ್ನಿ ಸವಿತಾ ಇಬ್ಬರೂ ವಿಶೇಷ ಚೇತನರು. ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ. ಆದರೂ ಸಂಸಾರ ಸಾಗಿಸುತ್ತಿದ್ದರು. ಆದರೆ ಸ್ವಾಮಿ ಕಳೆದ ಫೆಬ್ರವರಿ 12 ರಿಂದ ಕಾಣೆಯಾಗಿದ್ದ. ಈ ಬಗ್ಗೆ ಸವಿತಾ ಮಾರ್ಚ್ 4 ರಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಳು. ದಂಪತಿ ಅಂಗವಿಕಲರಾದ ಕಾರಣ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಸ್ವಾಮಿಯನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಮಾಡಿದವರೂ ಸಹ ವಿಕಲಚೇತನರೆ ಎಂಬ ಸತ್ಯ ಪೊಲೀಸರನ್ನೇ ದಂಗಾಗಿಸಿದೆ.
ಸ್ವಾಮಿಯ ಸ್ನೇಹಿತ ಶ್ರೀನಿವಾಸ್ ಸಹ ಮಾತು ಬರದ, ಕಿವಿ ಕೇಳದ ವ್ಯಕ್ತಿ. ಇಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ಹೀಗಿರುವಾಗ ಸ್ವಾಮಿಯ ಪತ್ನಿಯ ಮೇಲೆ ಶ್ರೀನಿವಾಸ್ ಕಣ್ಣು ಬಿದ್ದಿತ್ತು. ಹೇಗಾದರೂ ಆಕೆಯನ್ನು ಮದುವೆಯಾಗಲೇಬೇಕೆಂದು ಆತ ನಿರ್ಧಾರ ಮಾಡಿಕೊಂಡಿದ್ದ. ಆಕೆಯ ಜೊತೆ ನಿರಂತರವಾಗಿ ವೀಡಿಯೋ ಕಾಲ್ ಸಂಭಾಷಣೆಯನ್ನೂ ನಡೆಸುತ್ತಿದ್ದ ಆತ, ಅಗತ್ಯವಿದ್ದಾಗ ಹಣ ಸಹಾಯವನ್ನೂ ಮಾಡಿದ್ದ ಎನ್ನಲಾಗಿದೆ.
ಆರೋಪಿಯ ಬಂಧನ
ಫೆಬ್ರವರಿ 12ರಂದು ಕುಣಿಗಲ್ ತಾಲೂಕಿನ ಅಮೃತ್ತೂರಿಗೆ ಹಣ ಕೊಡುತ್ತೇನೆ ಎಂದು ಸ್ವಾಮಿಯನ್ನು ಕರೆಸಿದ್ದ ಆರೋಪಿ, ಆತನಿಗೆ ಮದ್ಯ ಕುಡಿಸಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬಾವಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಪೊಲೀಸರು ವಾಕ್ ಮತ್ತು ಶ್ರಾವಣ ತಜ್ಞರ ಸಹಾಯದಿಂದ ವಿಡಿಯೋ ಕಾಲ್ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ