ಕುಂದಾಪುರದ ಸರ್ಕಾರಿ ಶಾಲೆಗೆ ಬಂದ ಎಐ ರೋಬೋಟ್​​ ಟೀಚರ್​: ಕಾರ್ಯನಿರ್ವಹಣೆ ಹೇಗೆ?

ಕುಂದಾಪುರದ ಸರ್ಕಾರಿ ಶಾಲೆಗೆ ಬಂದ ಎಐ ರೋಬೋಟ್​​ ಟೀಚರ್​: ಕಾರ್ಯನಿರ್ವಹಣೆ ಹೇಗೆ?

ಉಡುಪಿ, ಏಪ್ರಿಲ್​​ 13: ತಂತ್ರಜ್ಞಾನ ಅಭಿವೃದ್ಧಿ ಹಿನ್ನೆಲೆ ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರದಲ್ಲಿಯೂ ಭಾರಿ ಸುಧಾರಣೆಗಳು ಕಂಡುಬರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 111 ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನರೇಟಿವ್ ಎಐ ಶಿಕ್ಷಕ ರೋಬೋಟ್ ಪರಿಚಯಿಸಲಾಗಿದೆ. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ರೋಬೋಟ್​​ ಶಿಕ್ಷಕರಂತಹ ವಿನೂತನ ಪ್ರಯೋಗ ಇದೇ ಮೊದಲಾಗಿದೆ.

ಐರಿಸ್ (IRIS) ಎಂಬ ಈ ರೋಬೋಟನ್ನು ನೀತಿ ಆಯೋಗದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿ ಮೇಕರ್ಸ್​​ಲ್ಯಾಬ್​​ ಎಜುಟೆಕ್​​ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಎರಡು ವರ್ಷಗಳ ಹಿಂದೆ ಇದೇ ಮಾದರಿಯ ರೋಬೋಟ್​​ನ ಕೇರಳದ ತಿರುವನಂತಪುರದ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿಗಿತ್ತು. ಇನ್ನು ವಂಡ್ಸೆ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್​​ನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಸೀರೆ ಧರಿಸಿರುವ ಮಾನವರೂಪದ ಈ ರೋಬಟ್​​ನ ಸಂವಾದಾತ್ಮಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಪರಿಚಯಿಸಿದ್ದೇವೆ. ಇದು ಶಿಕ್ಷಕರಿಗೆ ಪರ್ಯಾಯವಲ್ಲ, ಶಿಕ್ಷಕರಿಗೆ ಸಹಾಯಕವಾಗುವ ಸಾಧನ. 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದಾತ್ಮಕ ಕಲಿಕೆಗೆ ಇದು ಸಹಕಾರ ನೀಡುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಸಂಪೂರ್ಣವಾಗಿ ಬಳಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: SSLC ತೃತೀಯ ಭಾಷೆಗೆ ಗ್ರೇಡ್​​ ನಿರ್ಧಾರ ಹೇಗೆ?; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಕರಡು ಅಧಿಸೂಚನೆ ಪ್ರಕಟ

ಕೆಲವು ಖಾಸಗಿ ಶಾಲೆಗಳು ಈ ರೀತಿಯ ಸೌಲಭ್ಯವನ್ನು ಪ್ರಾರಂಭಿಸಿದ್ದರೂ, ರಾಜ್ಯದ ಸರ್ಕಾರಿ ಶಾಲೆಯಲ್ಲಿ ಇದು ಮೊದಲ ಪ್ರಯೋಗವಾಗಿದೆ. ಈ ಸರ್ಕಾರಿ ಶಾಲೆಯಲ್ಲಿ ಪ್ರೊಜೆಕ್ಟರ್‌ಗಳು, ಸ್ಮಾರ್ಟ್ ಇಂಟರಾಕ್ಟಿವ್ ಬೋರ್ಡ್‌ಗಳು ಮತ್ತು ಕಂಪ್ಯೂಟರ್ ಲ್ಯಾಬ್ ಕೂಡ ಇವೆ. ಖಾಸಗಿ ಶಾಲೆಗಳ ಮಟ್ಟಕ್ಕೆ ತಕ್ಕಂತೆ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುವುದು ನಮ್ಮ ಮುಖ್ಯ ಗುರಿ. ಈ ರೋಬೋಟ್‌ಗಾಗಿ ಸುಮಾರು 3.5 ಲಕ್ಷ ರೂ. ವೆಚ್ಚ ಮಾಡಲಾಗಿದೆ. ರೋಬೋಟ್ ಸರಿಯಾಗಿ ಕಾರ್ಯನಿರ್ವಹಿಸಲು ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ವಿದ್ಯುತ್ ಪೂರೈಕೆ ಅಗತ್ಯವಿದೆ. ಈ ಶಾಲೆ ಮುಚ್ಚುವ ಪರಿಸ್ಥಿತಿ ಎದುರಿಸುತ್ತಿದ್ದಾಗ, ಪ್ರವೇಶಗಳ ಕೊರತೆ ಹಿನ್ನೆಲೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಸುಮಾರು 3 ಕೋಟಿ ರೂ. ಹೂಡಿಕೆ ಮಾಡಿ, ಹೊಸ ತರಗತಿ ಕೊಠಡಿಗಳು, ಸೌರ ವಿದ್ಯುತ್ ವ್ಯವಸ್ಥೆ, ಶಾಲಾ ಬಸ್ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ. ಇಂಗ್ಲಿಷ್ ಮಾಧ್ಯಮವನ್ನು ಪರಿಚಯಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಎಐ ಶಿಕ್ಷಕ ರೋಬೋಟ್ ಪರಿಚಯವಾದ ನಂತರ ವಿದ್ಯಾರ್ಥಿಗಳ ದಾಖಲಾತಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಈಗಾಗಲೇ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಚಾರಣೆಗಳು ಹೆಚ್ಚಿವೆ. ಪ್ರಸ್ತುತ 1ರಿಂದ 7ನೇ ತರಗತಿವರೆಗೆ 334 ವಿದ್ಯಾರ್ಥಿಗಳು ಹಾಗೂ 15 ಶಿಕ್ಷಕರು ಈ ಶಾಲೆಯಲ್ಲಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *