ಚಿಕ್ಕಮಗಳೂರು, ಆಗಸ್ಟ್ 14: ಜಿಲ್ಲೆಯ ಕುದುರೆಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಆಫ್-ರೋಡ್ ಅಡ್ವೆಂಚರ್ ಡ್ರೈವ್’ (Off-road Adventure Drive) ಸಾಹಸಯಾತ್ರೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಈವೆಂಟ್‌ನಿಂದಾಗಿ ಗ್ರಾಮೀಣ ರಸ್ತೆಗಳಿಗೆ ಹಾನಿಯಾದರೂ ಅಥವಾ ಜಲಮೂಲಗಳು ಕಲುಷಿತಗೊಂಡರೂ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ
ಬೆಂಗಳೂರು ಮೂಲದ ಸಾಹಸ ಹವ್ಯಾಸಿಗಳ ಗುಂಪೊಂದು ಕುದುರೆಮುಖ ಭಾಗದಲ್ಲಿ ಈ ಆಫ್-ರೋಡ್ ಚಾಲನಾ ಈವೆಂಟ್ ಅನ್ನು ಆಯೋಜಿಸಿದೆ ಎನ್ನಲಾಗಿದೆ. ಮಳೆಯಿಂದಾಗಿ ಈಗಾಗಲೇ ಕೆಸರಾಗಿರುವ ಕಡಿದಾದ ಗುಡ್ಡಗಾಡು ಪ್ರದೇಶಗಳು, ನದಿ ಮತ್ತು ತೊರೆಗಳನ್ನು ದಾಟುವಂತಹ ಸಾಹಸ ಕೃತ್ಯಗಳು ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (CEO) ಸಚಿವ ಈಶ್ವರ್ ಖಂಡ್ರೆ ಅವರು ಲಿಖಿತ ನಿರ್ದೇಶನ ನೀಡಿದ್ದಾರೆ. ಈ ಸಾಹಸ ಕೃತ್ಯವು ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಪ್ರಮುಖವಾಗಿ ಕುಡಿಯುವ ನೀರಿನ ಮೂಲಗಳಾಗಿರುವ ನದಿಗಳು, ತೊರೆಗಳು ಮತ್ತು ನಾಲೆಗಳಿಗೆ ಇಂತಹ ಆಫ್-ರೋಡ್ ವಾಹನಗಳು ಪ್ರವೇಶಿಸದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.
ಪರಿಸರ ರಕ್ಷಣೆ ಬಗ್ಗೆ ಸಚಿವರ ಆದೇಶ
ಮಾರ್ಪಾಡು ಮಾಡಲಾದ (Modified) ಮತ್ತು ದೊಡ್ಡ ಆಫ್-ರೋಡ್ ಟೈರ್‌ಗಳನ್ನು ಹೊಂದಿರುವ ಇಂತಹ ವಾಹನಗಳನ್ನು ಮಳೆಯಿಂದ ತೇವಗೊಂಡಿರುವ ಗ್ರಾಮೀಣ ರಸ್ತೆಗಳಲ್ಲಿ ಅತಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಚಲಾಯಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತವೆ. ಅಷ್ಟೇ ಅಲ್ಲದೆ, ಇದು ತೀವ್ರ ಮಣ್ಣಿನ ಸವೆತಕ್ಕೂ (Soil Erosion) ಕಾರಣವಾಗುತ್ತದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಇಂತಹ ಚಟುವಟಿಕೆಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವು ಸ್ಥಳೀಯ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಲಿದೆ. ಸಂವಿಧಾನದ ವಿಧಿ 51A(g) ಅನ್ನು ಉಲ್ಲೇಖಿಸಿರುವ ಸಚಿವರು, ಅರಣ್ಯ, ನದಿ, ಸರೋವರ ಹಾಗೂ ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ನೆನಪಿಸಿದ್ದಾರೆ. ಈ ಹಿಂದೆ ಹಾಸನದ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಇಂತಹ ಆಫ್-ರೋಡಿಂಗ್ ನಡೆಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಿ, 40ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
